ಚಿಂತೆ ಬಿಡಿ. ಚೆನ್ನಾಗಿ ನಿದ್ದೆ ಮಾಡಿ….!

0
1211

ದೈಹಿಕ ಶ್ರಮವಹಿಸಿ ಕೆಲಸ ಮಾಡುವ ರೈತ ರಾತ್ರಿ 9ರಿಂದ ಮುಂಜಾನೆಯವರೆಗೆ ಸುಖವಾದ ನಿದ್ರೆ ಮಾಡುತ್ತಾನೆ. ಆತನ ಆರೋಗ್ಯ ಸಹ ಚೆನ್ನಾಗಿರುತ್ತದೆ. ಅದೇ ಮಾನಸಿಕ ಒತ್ತಡದಿಂದ ಕೆಲಸ ಮಾಡುವ ಉದ್ಯೋಗಿಗಳು ರಾತ್ರಿ ನಿದ್ರೆ ಬಾರದೇ ಷಡಪಡಿಸುತ್ತಾರೆ. ನಿದ್ರೆಯ ಮಾತ್ರೆಗಳಿಗೆ ಶರಣಾಗುತ್ತಾರೆ. ಹಾಗೂ ಅನೇಕ ದೈಹಿಕ, ಮಾನಸಿಕ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಸುಖಕರ ನಿದ್ದೆಗಾಗಿ ಮಾತ್ರೆಗಳಿಗೆ ಮೊರೆಹೊಗದೆ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಉತ್ತಮ.

ಸುಖಕರ ನಿದ್ದೆಗೆ ಹೀಗೆ ಮಾಡಿ:

*ಪ್ರತಿದಿನ ಕನಿಷ್ಠ ಒಂದು ಗಂಟೆಯ ಕಾಲ ದೈಹಿಕ ವ್ಯಾಯಾಮ ಮಾಡಿ. ಒಂದು ಗಂಟೆಯ ಯೋಗಾಭ್ಯಾಸವನ್ನು ಪ್ರತಿನಿತ್ಯ ರೂಢಿಸಿಕೊಂಡರೆ ಉತ್ತಮ.

*ಒತ್ತಡರಹಿತರಾಗಿರಿ: ಕಚೇರಿಯ ವಿಷಯಗಳನ್ನು ಮನೆಯಲ್ಲಿ ಚಿಂತಿಸಬೇಡಿ. ವೇಳೆಗೆ ಸರಿಯಾಗಿ ಕೆಲಸವನ್ನು ಪೂರ್ತಿಗೊಳಿಸುವ ಹವ್ಯಾಸ ಬೆಳೆಸಿಕೊಳ್ಳಿ.

*ನಿನ್ನೆಯ ಬಗೆಗೆ ಅಥವಾ ನಾಳೆಯ ಬಗೆಗೆ ಯಾವಾಗಲೂ ಚಿಂತೆ ಮಾಡುತ್ತಾ ಕುಳಿತುಕೊಳ್ಳಬೇಡಿ. ಪ್ರಶಕ್ತ ಸನ್ನಿವೇಶವನ್ನು ಎದುರಿಸಿ ಮುಂದುವರಿಯಿರಿ.

*ಪ್ರತಿ ಸಮಸ್ಯೆಗೂ ಪರಿಹಾರವಿದೆ. ಕೇವಲ ಸಮಸ್ಯೆಯ ಆಳವನ್ನೇ ಯೋಚಿಸುವುದು ಬಿಟ್ಟು ಪರಿಹಾರ ಹುಡುಕಿ.

*ಸಂತೃಪ್ತಿಯಿಂದಿರಿ: ನಮಗೆ ಜೀವನದಲ್ಲಿ ದೊರೆತ ಸೌಕರ್ಯಗಳಲ್ಲೇ ಸಂತೃಪ್ತಿ ಹೊಂದುವುದನ್ನು ಅಭ್ಯಾ ಮಾಡಬೇಕು.

*ಅತಿ ಆಸೆ ದುಃಖಕ್ಕೆ ಕಾರಣ. ನಿಮಗೆ ಸಿಕ್ಕಿರುವ ಸೌಲಭ್ಯಗಳ ಕುರಿತು ಸಂತೃಪ್ತ ಭಾವನೆ ತಳೆಯಿರಿ.

*ಮಾನಸಿಕ ಕ್ಷೋಭೆಗಳಿಂದ ಮುಕ್ತವಾಗಿರಲು ಭಕ್ತಿಯಿಂದ ದಿನಕ್ಕೆರಡು ಬಾರಿ ಪ್ರಾರ್ಥಿಸಿ ಪ್ರತಿದಿನಿತ್ಯ ದೇವರ ಪೂಜೆಯನ್ನು ಸಮರ್ಪಣಾಭಾವದಿಂದ ಮಾಡಿ.

*ಧಾರ್ಮಿಕ ಕೆಲಸಗಳಲ್ಲಿ ಶ್ರದ್ಧೆ-ಭಕ್ತಿಯಿಂದ ಭಾಗವಹಿಸಿ.

*ರಾತ್ರಿ ಊಟವನ್ನು ಸರಿಯಾದ, ನಿರ್ದಿಷ್ಟ ವೇಳೆಗೆ ಮಾಡುವುದನ್ನು ಅಭ್ಯಾಸ ಮಾಡಿ. ಊಟ ಮತ್ತು ನಿದ್ರೆಯ ನಡುವೆ 2-3 ಗಂಟೆಗಳ ಅವಧಿ ಇರಬೇಕು.

*ರಾತ್ರಿ ಮಿತವಾಗಿ ಆಹಾರ ಸೇವನೆ ಸಾಕು. ಹಣ್ಣು. ಹಸಿ ತರಕಾರಿ ಹೆಚ್ಚೆಚ್ಚು ಸೇವಿಸಿ.

*ಮಲಗುವ ಮುಂಚೆ ಭಯಾನಕ ಟಿ.ವಿ. ಧಾರವಾಹಿ, ಸಿನಿಮಾಗಳನ್ನು ನೋಡಬೇಡಿ. ಭಯಾನಕ ಕಥಾ ಪುಸ್ತಕಗಳನ್ನು ಓದದಿರಿ. ದೇವರ ನಾಮವನ್ನು ಸ್ಮರಿಸಿ ನಿದ್ರಿಸಿ.

*ತಲೆ ಪಾದಕ್ಕೆ ಸಾಸಿವೆ ಎಣ್ಣೆ ಹಚ್ಚಿ ಮಲಗಿ.

*ಚಹಾ-ಕಾಫಿಯಲ್ಲಿ ಅನೇಕ ಉತ್ತೇಜಕ ಪದಾರ್ಥಗಳಿರುತ್ತವೆ. ಇವುಗಳನ್ನು ದಿನಕ್ಕೆ ಒಂದು ಬಾರಿ ಮಾತ್ರ ಸೇವಿಸಿ. ಮದ್ಯಪಾನವನ್ನು ಪೂರ್ತಿಯಾಗಿ ತ್ಯಜಿಸಿ.

*ಯಾವುದೂ ಅತಿಯಾದರೆ ಒಳ್ಳೆಯದಲ್ಲ.

*ಊಟ, ಕೆಲಸ, ಲೈಂಗಿಕಾಸಕ್ತಿ ಹತೋಟಿಯಲ್ಲಿರಲಿ.

*ಹಗಲು ಹೊತ್ತಿನಲ್ಲಿ ನಿದ್ರೆ ಮಾಡಬೇಡಿ.

*ಚಿಕ್ಕಮಕ್ಕಳು, ವಯಸ್ಸಾದವರು ಹಾಗೂ ರೋಗಿಗಳನ್ನು ಬಿಟ್ಟು ಉಳಿದವರು ಹಗಲಿನಲ್ಲಿ ನಿದ್ರೆ ಮಾಡಬೇಕಾಗಿಲ್ಲ.

*ಕೊಠಡಿಯ ಕಿಟಕಿಗಳನ್ನು ತೆರೆದು ಮಲಗಿ, ಪ್ರಕೃತಿದತ್ತವಾದ ಪರಿಶುದ್ಧ ಗಾಳಿ ಸೇವಿಸಿ. ಅತ್ಯುತ್ತಮ ಶುದ್ಧವಾದ ಬೆಡ್ ಶೀಟುಗಳನ್ನು ಬಳಸಿ.

*ಪ್ರತಿನಿತ್ಯ ಶವಾಸನದ ಅಭ್ಯಾಸ ಮಾಡಿ. ಅಂಗಾತ ಮಲಗಿ ಇಡೀ ದೇಹಕ್ಕೆ ಪ್ರಜ್ಞಾಪೂರ್ವಕವಾಗಿ ವಿಶ್ರಾಂತಿ ಕೊಡಿ. ಕೊನೆಯಲ್ಲಿ ಓಂಕಾರವನ್ನು ಮೂರು ಬಾರಿ ದೀರ್ಘವಾಗಿ ಉಚ್ಚರಿಸಿ ಓಂಕಾರವನ್ನು ಮೂರು ಬಾರಿ ದೀರ್ಘವಾಗಿ ಉಚ್ಚರಿಸಿ ಓಂಕಾರದ ಅಲೆ, ತರಂಗಗಳನ್ನು ಹಮನಿಸುತ್ತಾ ದೇಹಕ್ಕೆ ವಿಶ್ರಾಂತಿ ನೀಡಿ.

*ತುಂಬಾ ಮೆತ್ತಗಿನ ಹಾಸಿಗೆ ಒಳ್ಳೆಯದಲ್ಲ. ಹತ್ತಿಯ ಎರಡು ಇಂಚಿನ ಹಾಸಿಗೆ ಉತ್ತಮ.

-ಡಾ| ವೆಂಕಟ್ರಮಣ ಹೆಗಡೆ