ಸೋಲಿಗೆ ಕಾರಣ ಅರಿತು….?

0
646

‘ಇನ್ನೂ ಸ್ವಲ್ಪ ಸಮಯಯಾವಕಾಶ ಸಿಕ್ಕಿದ್ದರೆ ಏನೇನೋ ಮಾಡಿಬಿತ್ತಿದ್ದೆ’ಇಂಥದೊಂದು ಮಾತನ್ನು ನಾವು ಅದೆಷ್ಟೋಬಾರಿ ನಮ್ಮೊಳಗೇ ಹೇಳಿಕೊಂಡಿದ್ದಿದೆ. ಹಾಗೆಯೇ ಅನೇಕರು ಈ ಮಾತನ್ನು ಹೇಳುವುದನ್ನು ಕೇಳಿಯೂ ಇದ್ದೇವೇ. ಪ್ರತೀ ಸೋಲಿಗೂ ನಾವು ಕಾರನ ಕಂಡುಕೊಳ್ಳುವುದೇ ಹೀಗೆ. ನನಗೆ ಇನ್ನೂ ಒಂದು ಅವಕಾಶ ಬೇಕಿತ್ತು. ಇನ್ನೂ ಹೆಚ್ಚು ಸಮಯಕ್ಕೆ ನಾನು ಅರ್ಹನಾಗಿದ್ದೆ ಎಂಬ ನಿಲುವುಗಳೊಳಗೆ ನಮ್ಮ ಆಲೋಚನೆಗಳೆಲ್ಲಾ ಹರಿದಾಡುತ್ತಿರುತ್ತವೆ. ಅಂದರೆ ನಮ್ಮ ಸೋಲಿನ ನಿಜವಾದ ಕಾರನ ನಮಗೆ ತಿಳಿಯುವುದೇ ಇಲ್ಲ. ಅದನ್ನು ಅರಿಯಬೇಕಿದ್ದರೆ ನಮ್ಮನ್ನೇ ನಾವು ವಿನರ್ಶಾತ್ಮಕವಾಗಿ ನೋಡಿಕೊಳ್ಳಲು ಕಲಿಯಬೇಕು.

ಈ ಮಾತು ಹೇಳಿದಾಕ್ಷಣ ಎಲ್ಲರೂ ‘ನಾನೂ ಯಾವಾಗಲೂ ವಿಮರ್ಶಾತ್ಮಕವಾಗಿಯೇ ಇರುತ್ತೇನೆ’ ಎಂಬ ತರ್ಕ ಮುಂದಿಡುತ್ತಾರೆ. ಆದರೆ ನಿರ್ದಿಷ್ಟ ಸೋಲುಗಳಿಗೆ ಕಾರಣ ಹುಡುಕುವ ಹೊತ್ತಿನಲ್ಲಿ ಬೇಕಿರುವ ನೆಪಗಳನ್ನು ಹುಡುಕುವಲ್ಲಿಗೆ ವಿಮಾರ್ಶಾತ್ಮಕತೆ ಸೀಮಿತವಾಗಿರುತ್ತದೆಯೇ ಹೊರತು ಈ ನೆನಪುಗಳ ಆಚೆಗೆ ನಮ್ಮ ಚಿಂತನೆಗಳು ಹರಿಯುವುದಿಲ್ಲ. ಹೀಗಾಗುವುದೇ ಸರಿ ಎಂಬ ವಾತಾವರಣದಲ್ಲಿ ಬೆಳೆದಿದ್ದೇವೆ. ಹಾಗಾಗಿ ನಮಗೂ ಅದನ್ನು ಮಾಡುವುದೇ ಸರಿ ಎನ್ನಿಸುತ್ತಿರುತ್ತದೆ. ಇದನ್ನು ಮೀರುವುದೇ ಸವಾಲು. ಅದನ್ನು ಮೀರಿದ ಕ್ಷಣದಲ್ಲಿ ಕಾರಣಗಳನ್ನು ಅರಿಯುವಂತೆಯೇ ಗೆಲುವಿನ ಕಾರಣಗಳೂ ಅರ್ಥವಾಗುತ್ತವೆ. ಸೋಲಿನ ಕಾರಣಗಳನ್ನು ಅರಿಯುವಷ್ಟೇ ಮುಖ್ಯ ಗೆಲುವಿನ ಕಾರಣಗಳನ್ನು ಅರಿಯುವುದು. ಅನೇಕ ಸಂದರ್ಭಗಳಲ್ಲಿ ನಮ್ಮ ಗೆಲುವಿಗೆ ಯಾದೃಚ್ಛಿಕ ಎನ್ನಿಸುವಂಥ ಕಾರಣಗಳಿರುತ್ತವೆ. ಇದನ್ನು ಮರೆತು ನಮ್ಮ ಸಾಮರ್ಥ್ಯವೇ ನಮ್ಮನ್ನು ಗೆಲ್ಲಿಸಿತು ಎಂದು ಭಾವಿಸಿದರೆ ಅದು ಮುಂದಿನ ಸೋಲೊಂದಕ್ಕೆ ಮುನ್ನುಡಿಯಾಗಿ ಬಿಡುತ್ತದೆ. ಪ್ರತಿಯೊಂದನ್ನೂ ಹೀಗೆ ವಿಶ್ಲೇಷಣೆ ಮೂಲಕವೇ ಅರಿತುಕೊಳ್ಳಬೇಕೇ ಎಂಬ ಪ್ರಶ್ನೆ ಇಲ್ಲಿದೆ. ಈ ಪ್ರಶ್ನೆಯೇನೋ ಸರಿಯಾದುದೇ. ಇಂಥ ವಿಶ್ಲೇಷಣೆಗಳ ಅಗತ್ಯವಿಲ್ಲದ ಸ್ಥಿತಿಗೆ ನಾವು ರಲುಪಿದ್ದರೆ ಅವುಗಳ ಅಗತ್ಯವಿಲ್ಲ. ಅಂದರೆ ಸೋಲು ಮತ್ತು ಗೆಲುವುಗಳುನಮ್ಮನ್ನು ಏನೂ ಮಾಡಲಾರವು ಎಂಬ ಸ್ಥಿತಿ ಅದು . ಅಂದರೆ ನಿಜ ಅರ್ಥದ ಸನ್ಯಾಸವದು.

ಲೌಕಿಕರಾಗಿರುವ ನಮಗೆ ಸಾತ್ವಿಕರಾಗಿ ಉಳಿಯುವುದಕ್ಕೆ ಸೋಲು ಮತ್ತು ಗೆಲುವುಗಳ ವಿಶ್ಲೇಷಣೆ ಅಗತ್ಯ. ಹೀಗಾದರೆ ಸೋಲು ನಮ್ಮನ್ನು ಕುಗ್ಗಿಸುವುದಿಲ್ಲ. ಗೆಲುವು ಅಹಂಕಾರವನ್ನು ಹೆಚ್ಚಿಸುವುದಿಲ್ಲ. ಇಂಥದ್ದೊಂದು ನಿರ್ಲಿಪ್ತ ವಿಶ್ಲೇಷಣೆಗೆ ಬೇಕಾದ ಮನಃಸ್ಥಿತಿ ಸಾಧಿಸುವುದು ಹೇಗೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಇದಕ್ಕೆ ಸುಲಭದಾರಿಗಳಿಲ್ಲ ನಿರಂತರ ಅಭ್ಯಾಸದಿಂದ ಬರುವ ಮನಃಸ್ಥಿತಿ ಇದು. ನಮ್ಮನ್ನೇ ನಾವು ಅನುಮಾನದಿಂದ, ನಮ್ಮ ಪ್ರಾಮಾಣಿಕತೆಯನ್ನೇ ಸಂಶಯದಿಂದ ನಾವೇ ನೋಡಿಕೊಳ್ಳುವುದು ಸುಲಭವೇನು ಅಲ್ಲ. ಇಂಥ ಪ್ರಯತ್ನ ಮಾಡಿದಾಗಲೆಲ್ಲಾ ನಮ್ಮ ಮನಸ್ಸು ಹೊಸ ನೆಪಗಳ ಜೊತೆಗೆ ಅದನ್ನು ಸೋಲಿಸಲು ಮುಂದಾಗುತ್ತಿರುತ್ತದೆ. ಈ ಅಂತರ್ಯುದ್ಧದಲ್ಲಿ ಗೆದ್ದಾಗ ನಾವು ಸತತ ಗೆಲುವಿನ ಹಾದಿಯಲ್ಲಿರುತ್ತೇವೆ.