ಈಗ ಭಾರೀ ಸುದ್ದಿ ಮಾಡುತ್ತಿರುವ ಮಾದಕ ವಸ್ತು ಗಾಂಜಾ ನಮ್ಮ ರಾಜ್ಯದ ಹಲವು ದೇವಸ್ಥಾನದಲ್ಲಿ ಪ್ರಸಾದದ ಥರ ಕೊಡೋ ಪದ್ದತಿ ಇದೆ ಅಂದ್ರೆ ನಂಬುತ್ತೀರಾ??

0
398

ರಾಜ್ಯದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್‌ ಮಾಫಿಯಾ ಬೆಳಕಿಗೆ ಬಂದ ಬೆನ್ನಲ್ಲೇ, ಪೊಲೀಸರು ರಾಜ್ಯಾದ್ಯಂತ ಡ್ರಗ್‌ ಪೆಡ್ಲರ್‌ಗಳನ್ನು ಬಂಧಿಸುವ ಹಾಗೂ ಗಾಂಜಾ ಬೆಳೆಯನ್ನು ನಾಶಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ರಾಜ್ಯದಲ್ಲಿ ಕೆಲ ದಿನಗಳ ಹಿಂದೆ ಬೆಳಕಿಗೆ ಬಂದ ಡ್ರಗ್‌ ಮಾಫಿಯಾದ ನಂಟು ಸ್ಯಾಂಡಲ್‌ವುಡ್‌ಗೆ ಸುತ್ತಿಕೊಂಡಿದ್ದು, ನಟಿ ರಾಗಿಣಿ ದ್ವಿವೇದಿ ಹಾಗೂ ನಟಿ ಸಂಜನಾ ಗಲ್ರಾನಿ ಸೇರಿ ಹಲವರ ಹೆಸರು ಡ್ರಗ್ಸ್‌ ಪ್ರಕರಣದಲ್ಲಿ ಬೆಳಕಿಗೆ ಬಂದಿದೆ. ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದು, ಹಲವರ ಮೇಲೆ ಎಫ್‌ಐಆರ್‌ ದಾಖಸಿದ್ದಾರೆ. ಇನ್ನು, ಹಲವರ ಹೆಸರು ಬಹಿರಂಗವಾಗುವ ಸಾಧ್ಯತೆ ಇದೆ. ಈ ಮಾಫಿಯಾ ಬೆಳಕಿಗೆ ಬಂದ ನಂತರ ರಾಜ್ಯದಾದ್ಯಂತ ಪೊಲೀಸರು ಡ್ರಗ್‌ ಜಾಲವನ್ನು ಜಾಲಾಡುತ್ತಿದ್ದು, ಡ್ರಗ್‌ ಪೆಡ್ಲರ್‌ಗಳನ್ನು ಬಂಧಿಸುವ ಹಾಗೂ ಗಾಂಜಾ ಬೆಳೆಯನ್ನು ನಾಶಪಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

ಆದರೆ, ಉತ್ತರ ಕರ್ನಾಟಕದ ಹಲವು ದೇವಾಲಯಗಳಲ್ಲಿ ಗಾಂಜಾ ಪವಿತ್ರ ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ. ಗಾಂಜಾವನ್ನು ಜ್ಞಾನೋದಯ ಸಾಧಿಸುವ ಸಾಧನವೆಂದು ನಂಬಿದ್ದಾರೆ.

ಉತ್ತರ ಕರ್ನಾಟಕದ ಶರಣ, ಅರುಡ, ಶಪತ ಮತ್ತು ಅವಧೂತ ಸಂಪ್ರದಾಯಗಳಲ್ಲಿ ಭಕ್ತರು ಗಾಂಜಾವನ್ನು ವಿವಿಧ ರೂಪಗಳಲ್ಲಿ ಸೇವಿಸಲು ಬಯಸುತ್ತಾರೆ. ಯಾದಗಿರಿ ಜಿಲ್ಲೆಯ ತಿಂತಿಣಿಯ ಮೌನೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷ ಜನವರಿಯಲ್ಲಿ ವಾರ್ಷಿಕ ಜಾತ್ರೆ ನಡೆಯುತ್ತದೆ. ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಸೇರುತ್ತಾರೆ. ಇಲ್ಲಿಗೆ ಬರುವ ಭಕ್ತರು ಮೌನೇಶ್ವರ ಅಥವಾ ಮಾನಪ್ಪನ ದರ್ಶನ ಮಾಡಿದ ಬಳಿಕ ಸೇದಲು ಗಾಂಜಾದ ಸಣ್ಣ ಪ್ಯಾಕೆಟ್ ಅನ್ನು ಪ್ರಸಾದವಾಗಿ ಸ್ವೀಕರಿಸುತ್ತಾರೆ.

ಈ ದೇವಸ್ಥಾನದಲ್ಲಿ ಗಾಂಜಾವನ್ನು ಮೌನೇಶ್ವರ ಜನರಿಗೆ ಪರಿಚಯಿಸಿದ್ದರಿಂದ ಅದರ ಬಳಕೆ ಸಾಂಪ್ರದಾಯಿಕವಾಗಿದೆ. ಈ ಪವಿತ್ರ ಗಿಡ ಆಧ್ಯಾತ್ಮಿಕ ಜ್ಞಾನವನ್ನು ಹೆಚ್ಚಿಸುವ ಮಾರ್ಗ ತೋರಿಸುತ್ತದೆ ಎಂದು ಭಕ್ತರು ಮತ್ತು ಸಂತರು ನಂಬಿದ್ದಾರೆ ಎಂದು ದೇವಾಲಯ ಸಮಿತಿ ಸದಸ್ಯ ಗಂಗಾಧರ್‌ ನಾಯಕ್‌ ಹೇಳಿದರು. ದೇವಾಲಯ ಮನರಂಜನಾ ಉದ್ದೇಶಗಳಿಗಾಗಿ ಗಾಂಜಾವನ್ನು ಹೊರಗಿನವರಿಗೆ ಮಾರಾಟ ಮಾಡಲ್ಲ. ಜಾತ್ರೆಯ ಸಮಯದಲ್ಲಿ ಯಾರಾದರೂ ಬಂದು ಸೇದಬಹುದು. ಕೆಲವರು ಗಾಂಜಾವನ್ನು ಕುದಿಸಿದ ನಂತರ ತಿನ್ನುತ್ತಾರೆ. ಇತರರು ಅದನ್ನು ತಂಬಾಕು ಪುಡಿಯಂತೆ ಸೇವಿಸುತ್ತಾರೆ ಎಂದು ಹೇಳಿದರು.

ಶರಣ ಸಂಪ್ರದಾಯ ಪಾಲಿಸುವ ಮಹಾಂತೇಶ್‌ ಕೆ. ರಾಯಚೂರು ಮತ್ತು ಯಾದಗಿರಿಯ ಹಲವು ದೇವಸ್ಥಾನ ಮತ್ತು ಮಠಗಳಿಗೆ ಭೇಟಿ ನೀಡಿದ್ದಾರೆ. ಅವರು ಹೇಳುವಂತೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಅಂಬಾ ಮಠದಲ್ಲಿ ಈ ಸಂಸ್ಕೃತಿಯನ್ನು ಕಂಡಿದ್ದೇನೆ ಎನ್ನುತ್ತಾರೆ.

ಮುಂದುವರಿಸಿ, ಗಾಂಜಾ ಒಂದು ರೀತಿಯ ಅನಂತ ಸಂತೋಷ ಸಾಧಿಸಲು ಸಹಾಯ ಮಾಡುತ್ತದೆ ಎಂದು ನಾನು ನಂಬುತ್ತೇನೆ. ಇದು ಚಟವಾಗುವುದಿಲ್ಲ. ಅನೇಕರು ವಾರಕ್ಕೊಮ್ಮೆ ಅಥವಾ ದಿನಕ್ಕೊಮ್ಮೆ ಸೇದುತ್ತಾರೆ ಮತ್ತು ಧ್ಯಾನ ಮಾಡುತ್ತಾರೆ ಎಂದು ಮಹಾಂತೇಶ್ ಹೇಳಿದರು. ಗಾಂಜಾ ಔಷಧೀಯ ಗುಣಗಳನ್ನು ಹೊಂದಿದೆ ಎನ್ನುವುದಕ್ಕೆ ಅದನ್ನು ಬಳಸುವ ಹಲವರು ಆರೋಗ್ಯವಾಗಿರುವುದೇ ಸಾಕ್ಷಿ ಎಂಉ ಮಹಾಂತೇಶ್‌ ಹೇಳಿದ್ದಾರೆ.

ಇನ್ನು, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸಿದ್ಧಾವತ ಧಾಮ ಶಿವಯೋಗಿ ಆಶ್ರಮದ ಸಿದ್ದರಾಮೇಶ್ವರ ಶಿವಯೋಗಿಗಳು ದಿನಕ್ಕೆ ಒಂದು ಬಾರಿ ಗಾಂಜಾವನ್ನು ಸೇವಿಸುತ್ತಿದ್ದು, ಅವರು ಗಾಂಜಾವನ್ನು ಪವಿತ್ರ ಎಂದು ಪರಿಗಣಿಸಿದ್ದಾರೆ. ನಾವು ಧ್ಯಾನದ ಸಮಯದಲ್ಲಿ ಸುತ್ತಮುತ್ತಲಿನ ಶಬ್ಧವನ್ನು ಕೇಳದಿರಲು ಗಾಂಜಾ ತೆಗೆದುಕೊಳ್ಳುತ್ತೇವೆ. ಇದು ಧ್ಯಾನಕ್ಕೆ ಸಹಾಯ ಮಾಡುವ ಏಜೆಂಟ್ ಇದ್ದಂತೆ ಎಂದು ಅವರು ಹೇಳಿದರು.

ಅಷ್ಟೇ ಅಲ್ಲದೇ, ಶರಣ ಸಮುದಾಯದ ಬಗ್ಗೆ ಸಂಶೋಧನೆ ಮಾಡುತ್ತಿರುವ ಪ್ರಾಧ್ಯಾಪಕಿ ಮೀನಾಕ್ಷಿ ಬಾಳೆ, ದೇವಾಲಯಗಳಲ್ಲಿ ಗಾಂಜಾ ಸೇದುವ ಅಥವಾ ಸೇವಿಸುವವರು ವ್ಯಸನಿಗಳಲ್ಲ ಎಂದು ಹೇಳಿದ್ದಾರೆ. ಸಂಪ್ರದಾಯಗಳನ್ನು ಗೌರವಿಸುವ ಸಲುವಾಗಿ ದೇವಾಲಯಗಳಲ್ಲಿ ಗಾಂಜಾ ಬಳಕೆ ಆಗುತ್ತಿದ್ದರು ಪೊಲೀಸರು ನೋಡಿಕೊಂಡು ಸುಮ್ಮನಿರುತ್ತಾರೆ ಎಂಬುದು ಜನರ ಅಭಿಪ್ರಾಯವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಯಚೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ್‌ ನಿತ್ಯಂ, ಈಗ ಎಲ್ಲೆಲ್ಲಿ ಗಾಂಜಾ ಲಭ್ಯವೋ ಅದನ್ನು ಭೇದಿಸಲು ಪ್ರಾರಂಭ ಮಾಡಿದ್ದೇವೆ. ವಿಶೇಷವಾಗಿ ದೇವಾಲಯಗಳು ಅಥವಾ ಮಠಗಳ ಬಗ್ಗೆ ನನಗೆ ತಿಳಿದಿಲ್ಲ. ಆದರೆ, ಆ ಬಗ್ಗೆ ನಮಗೆ ಮಾಹಿತಿ ಸಿಕ್ಕರೆ ಆ ಸ್ಥಳಗಳ ಮೇಲೆ ಖಂಡಿತ ದಾಳಿ ನಡೆಸುತ್ತೇವೆ ಎಂದು ಹೇಳಿದ್ದಾರೆ.