ಬಾದಾಮಿ ಚಾಲುಕ್ಯರ ಕುಲದೇವತೆಯಾದ ಸರ್ವಶಕ್ತ್ಯಾತ್ಮಕ ಶ್ರೀ ಬನಶಂಕರಿ ಕ್ಷೇತ್ರದ ಸ್ಥಳ ಮಹಾತ್ಮೆ…

0
2386

ಉತ್ತರ ಕರ್ನಾಟಕದ ಬಾಗಲ ಕೋಟೆಯ ಜಿಲ್ಲೆಯ ಬಾದಾಮಿಯ ಶಾಕಾಂಬರಿ ವನದ ಚೋಲಗುಡ್ಡ ಪ್ರದೇಶದಲ್ಲಿ ನೆಲೆಸಿರುವ ಚಾಲುಕ್ಯರ ಕುಲದೇವತೆ, ಸಿಂಹವಾಹಿನಿ ತಾಯಿ ಶ್ರೀ ಬನಶಂಕರಿ ಕ್ಷೇತ್ರ ನಿಜಕ್ಕೊ ಆಸ್ತಿಕರ, ಶಕ್ತಿ ಉಪಾಸಕರ ಪವಿತ್ರ ಕ್ಷೇತ್ರ. ಶಕ್ತಿ ಪೀಠಗಳಲ್ಲಿ ಒಂದಾಗಿರುವ ಬನಶಂಕರಿಯು ಬಾದಾಮಿಯಿಂದ ಕೇವಲ ೬ ಕಿಮಿ ದೂರದಲ್ಲಿರುವ ತಿಲಕಾರಣ್ಯದ ಶಾಕಾಂಬರಿ ವನದ ಶ್ರೀ ಬನಶಂಕರಿ ಅಮ್ಮನವರು ಭಕ್ತರ ಕೋರಿಕೆಗಳನ್ನು ಈಡೇರಿಸುವ ಮಾತೆಯಾಗಿ ನೆಲೆಸಿದ್ದಾಳೆ.

ಪುರಾಣ ಕಾಲದಿಂದಲೂ ಪ್ರಸಿದ್ಧಿಯಾಗಿರುವ ಶ್ರೀ ಬನಶಂಕರಿ ಕ್ಷೇತ್ರವೂ ತನ್ನ ಮೂಲ ಸ್ಥಾನದ ಬಗ್ಗೆ ತನ್ನದೇ ಆದ ಪೌರಾಣಿಕ ಹಿನ್ನಲೆಯನ್ನು ಹೊಂದಿದೆ. ಸ್ಕಂದ ಪುರಾಣದಲ್ಲಿ ಶಿವ ಪಾರ್ವತಿಯರ ಸಂವಾದದ ಸಾರದಂತೆ ಶಾಕಾಂಬರಿ ವನವೋ ಬನಶಂಕರಿಯ ಮೂಲಸ್ಥಾನವಾಗಿದೆ ಎಂಬುದು ತಿಳಿದು ಬಂದಿದೆ. ಹರಿದ್ರಾ ತೀರ್ಥದಿಂದ ಪಾವನಗೊಂಡ ಈ ಕ್ಷೇತ್ರವೂ ನಿತ್ಯ ಹರಿದ್ವರ್ಣದ ಕಾಡುಗಳ ಹಸಿರಿನಿಂದ ಕಂಗೊಳಿಸುವುತ್ತಿದೆ.

ಕಾಶಿಯನ್ನು ಬಿಟ್ಟು ಹೊರಟ ಮುನಿಶ್ರೇಷ್ಠ ಅಗಸ್ತ್ಯರು ತಮ್ಮ ಪತ್ನಿ ಲೋಪಾಮುದ್ರೆ ಸಮೇತರಾಗಿ ತಪಸ್ವಿಗಳ ತವರೂರಾದ, ಸದಾ ಹಸಿರಿನಿಂದ ಕೂಡಿದ ಅರಣ್ಯ,ಬೆಟ್ಟ ಗುಡ್ಡಗಳಿಂದ ಆವೃತವಾದ ಬಾದಾಮಿಯಲ್ಲಿ ನೆಲೆಸಿ ಲೋಕ ಕಂಟಕರಾದ ವಾತಾಪಿ ಇಲ್ವರೆಂಬ ರಾಕ್ಷಸರನ್ನು ಸಂಹರಿಸಿ ತಮ್ಮಿಚ್ಛೆಯಂತೆ ಪಾರ್ವತಿ ದೇವಿಯನ್ನು ಬನಶಂಕರಿ ರೂಪದಲ್ಲಿ ಬನಶಂಕರಿ ಕ್ಷೇತ್ರದಲ್ಲಿ ಲೋಕ ಕಲ್ಯಾಣಾರ್ಥವಾಗಿ ನೆಲೆಯೂರುವಂತೆ ಮಾಡಿದರು.

ಶ್ರೀ ಬನಶಂಕರಿ ಕ್ಷೇತ್ರದ ಪರಿಸರದಲ್ಲಿ ವಿಶಾಲವಾದ ಹರಿದ್ರಾ ತೀರ್ಥವಲ್ಲದೆ,ತೈಲ ತೀರ್ಥ, ಶ್ರೀ ಮಹಾಕೂಟದ ಕಾಶಿತೀರ್ಥ, ಬಾದಾಮಿಯ ಅಗಸ್ತ್ಯ ತೀರ್ಥ,ಕೋತಿ ತೀರ್ಥ,ಕ್ಷಮಾ ತೀರ್ಥ, ಪದ್ಮತೀರ್ಥ,ಅಶ್ವತ್ತಾಮ ತೀರ್ಥಗಳನ್ನೊಳಗೊಂಡಂತೆ ಒಟ್ಟು ೧೨ ಪವಿತ್ರ ತೀರ್ಥಗಳಿವೆ.

ಐದು ಅಡಿ ಎತ್ತರದ, ಕಪ್ಪು ಶಿಲೆಯಲ್ಲಿ ಮೂಡಿರುವ ತಾಯಿಯ ವಿಗ್ರಹವು ಅಷ್ಟ ಭುಜಗಳನ್ನು ಹೊಂದಿದ್ದು ಆ ಕೈಗಳು ಖಡ್ಗ, ಗಂಟೆ, ತ್ರಿಶೂಲ, ಲಿಪಿ, ಡಾಮರು, ಢಾಲು, ರುಂಡ ಮತ್ತು ಅಮೃತ ಪಾತ್ರೆಗಳಿಂದ ಅಲಂಕೃತಗೊಂಡಿದೆ.ಬನಶಂಕರಿಯ ದಿವ್ಯ ತೇಜಸ್ಸುಳ್ಳ ಈ ಸುಂದರ ಮೂರ್ತಿಯನ್ನು ನೋಡಲು ಎರಡು ಕಣ್ಣುಗಳು ಸಾಲದು. ದುರ್ಗಮಾಸುರ, ರಕ್ತ ಬೀಜಾಸುರ, ಧೂಮ್ರಾಕ್ಷ, ಮೊದಲಾದ ಕ್ರೂರ ರಾಕ್ಷಸರನ್ನು ಸಂಹರಿಸಿದ್ದ ದೇವಿಯ ತ್ರಿದಂಡಿ ಮೊದಲಾದ ಋಷಿಗಳ ಹಾಗು ದೇವತೆಗಳ ಕೋರಿಕೆಯನ್ನು ಮನ್ನಿಸಿ ತನ್ನ ಉಗ್ರರೂಪವನ್ನು ತ್ಯಜಿಸಿ ಸೌಮ್ಯ ರೂಪ ತಾಳಿ ಈ ಕ್ಷೇತ್ರದಲ್ಲಿ ನೆಲೆಸಿದಳಂತೆ. ಒಂದು ಸಾವಿರ ವರ್ಷದ ಇತಿಹಾಸವನ್ನು ಹೊಂದಿರುವ ಬನಶಂಕರಿ ದೇಗುಲವು ಪುರಾಣಗಳಲ್ಲಿ ಉಲ್ಲೇಖವಾಗಿರುವಂತೆ ಪದ್ಮರಾಜನಿಂದ ನಿರ್ಮಿತವಾಗಿತ್ತೆಂದೂ ಆಗಿನ ಹಳೆಯ ಬನಶಂಕರಿ ದೇವಾಲಯದ ಗರ್ಭಗೃಹವು ಭೂಗರ್ಭದಲ್ಲಿ ಹೂತು ಹೋಗಿದೆ ಎನ್ನಲಾಗಿದೆ. ನಂತರ ಚಾಲುಕ್ಯ ಅರಸರ ಕಾಲದಲ್ಲಿ ಈ ದೇಗುಲವು ಪುನಃ ಜೀರ್ಣೋದ್ಧಾರವಾಯಿತು. ದೇಗುಲದ ಸಮುಚ್ಚಯದಲ್ಲಿ ಚಾಲುಕ್ಯ ಶೈಲಿಯ ಶಿಲ್ಪಕಲೆಯನ್ನು ಕಾಣಬಹುದು.

ನಾಲ್ಕು ಭವ್ಯವಾದ ದೀಪಸ್ತಾಂಬಗಳಿಂದ ಅಲಂಕೃತಗೊಂಡಿರುವ ದೇಗುಲ, ಮುಂಭಾಗದ ಗರ್ಭಗುಡಿಯಲ್ಲಿ ಆಸೀನಳಾಗಿರುವ ತಾಯಿ ಬನಶಂಕರಿ, ಎದುರಿನ ಹರಿದ್ರಾ ತೀರ್ಥದ ರಮಣೀಯತೆ ಮೊದಲಾದವುಗಳು ಭಕ್ತರ ಹೃದಯದಲ್ಲಿ ಮನೆಮಾಡಿಬಿಡುತ್ತವೆ. ಭಕ್ತಿಗೆ ದೇವಿಯ ದಿವ್ಯ ದರ್ಶನವಾದರೆ, ಹೊಟ್ಟೆಗೆ ರೊಟ್ಟಿ ಗಡಿಗೆ ಮೊಸರು ಹೆಚ್ಚು ಪ್ರಿಯವಾಗುತ್ತದೆ.

ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಶ್ರೀ ಬನಶಂಕರಿ ದೇವಿಗೆ ಲಕ್ಷ ಬಿಲ್ವಾರ್ಚನೆ, ಮಹಾರುದ್ರಾಭಿಷೇಕ ಮುಂತಾದ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಕಾರ್ತಿಕ ಮಾಸದ್ಲಲಿ ಸಂಪೂರ್ಣ ದೀಪೋತ್ಸವವು ಮತ್ತು ಪುಷ್ಯ ಶುದ್ಧ ಅಷ್ಟಮಿಯಿಂದ ಆಗಮೋಕ್ತ ಉತ್ಸವವು ನಡೆದು ಪುಷ್ಯ ಹುಣ್ಣಿಮೆಯವರೆಗೂ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ರಥೋತ್ಸವವು ಬಹಳ ವಿಜೃಂಭಣೆಯಿಂದ ನಡೆಯುತ್ತದೆ.

ಬೆಂಗಳೂರಿನಿಂದ ಶ್ರೀ ಬನಶಂಕರಿ ದೇವಸ್ಥಾನವು ೫೮೦ಕಿಮಿ ದೂರದಲ್ಲಿದ್ದು, ಬಾಗಲಕೋಟೆಯಿಂದ ೩೮ಕಿಮಿ ದೂರದಲ್ಲಿದೆ. ಶ್ರೀ ಬನಶಂಕರಿ ಕ್ಷೇತ್ರದಿಂದ ಭಾರತದಲ್ಲಿಯೇ ಎರಡನೇ ಅತಿ ದೊಡ್ಡ ರಥ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಶ್ರೀ ಶಿವಯೋಗ ಮಂದಿರವು ಕೇವಲ ೪ ಕಿಮಿ ದೂರದ್ಲಲಿಫ್ದೆ. ಇದೆ ಶಿವಯೋಗದಿಂದ ಮಹಾಕೂಟ ಕ್ಷೆತ್ರವೂ ೭ ಕಿಮಿ ದೂರದಲ್ಲಿದೆ. ಬಾದಾಮಿಯಿಂದ ಒಂದು ಟಾಕ್ಸಿ ಅಥವಾ ಆಟೋ ಮಾಡಿದ್ದಲ್ಲಿ ಐಹೊಳೆ, ಪಟ್ಟದಕಲ್ಲು ಗಳ ಜೊತೆ ಮೇಲಿನ ಎಲ್ಲ ಕ್ಷೇತ್ರಗಳನ್ನು ನೋಡಬಹುದು.

Also read: ಕೇಳಿದ ವರವನ್ನು ಪ್ರಸಾದ ಮೂಲಕ ಪವಾಡ ರೀತಿ ಕೊಡುವ ಈ ಹಾಲುರಾಮೆಶ್ವರ ಕ್ಷೇತ್ರಕ್ಕೆ ನೀವು ಒಮ್ಮೆ ಭೇಟಿ ಕೊಡಲೇಬೇಕು..!!