ಶ್ರೀರಂಗನಾಥನ ದರ್ಶನ ಪಡೆಯಲು ಶ್ರೀರಂಗಪಟ್ಟಣ , ಶ್ರೀರಂಗಂಗೆ ಹೋಗಲಾಗದವರು ಚಿಕ್ಕಬಳ್ಳಾಪುರ ಜಿಲ್ಲೆಯ ಶ್ರೀ ರಂಗಸ್ಥಳಕ್ಕೆ ಭೇಟಿ ನೀಡಲೇಬೇಕು…

0
1149

ವಿಜಯನಗರ, ಹೊಯ್ಸಳ ಚಾಲುಕ್ಯರ ಶಿಲ್ಪಕಲಾ ಸಂಗಮ ಈ ರಂಗಸ್ಥಳ..

ಚಿಕ್ಕಬಳ್ಳಾಪುರದಿಂದ ಗೌರಿಬಿದನೂರು ಮಾರ್ಗದಲ್ಲಿ ಕೇವಲ ೫ ಕಿಮಿ ದೂರದಲ್ಲಿರುವ ಈ ರಂಗಸ್ಥಳದ ಕಪ್ಪು ಬಣ್ಣದ ಸಾಲಿಗ್ರಾಮ ಶಿಲೆಯ ಲಕ್ಷ್ಮಿ ಪದ್ಮಾವತಿಯರೊಡನೆ ಪವಡಿಸಿರುವ ಶ್ರೀ ರಂಗನಾಥ ಸ್ವಾಮಿಯ ಚೆಲುವನ್ನು ವರ್ಣಿಸಲು ಶಬ್ದಗಳು ಸಾಲದು.ಚಿಕ್ಕಬಳ್ಳಾಪುರ ಗೌರಿಬಿದನೂರು ಮುಖ್ಯರಸ್ತೆಯ ಬಲಕ್ಕೆ ಕೇವಲ ಅರ್ಧ ಕಿಮಿ ದೂರದಲ್ಲಿರುವ ಈ ದೇಗುಲದ ಶಿಲ್ಪಕಲೆಯು ವಿಜಯನಗರ ಶೈಲಿಯಲ್ಲಿದೆ. ಗರ್ಭಗುಡಿಯ ಮುಖ ಮಂಟಪ, ಸಭಾಮಂಟಪದಲ್ಲಿನ ಕಂಬಗಳು ಸುಂದರವಾದ ದೇವರುಗಳ ಕೆತ್ತನೆಯಿಂದ ಕೂಡಿವೆ. ರಾಮಾನುಜಾಚಾರ್ಯರನ್ನೊಳಗೊಂಡಂತೆ ಅನೇಕ ಯತಿಗಳ ಸುಂದರ ಮೂರ್ತಿಗಳನ್ನೂ ಇಲ್ಲಿ ಕಾಣಬಹುದು. ದೇಗುಲವು ವಿಜಯನಗರ ಶೈಲಿಯಲ್ಲಿದ್ದರೂ ಹೊಯ್ಸಳ ಚೋಳರ ಶಿಲ್ಪಕಲೆಯ ಪ್ರಭಾವವೂ ಎದ್ದು ಕಾಣುತ್ತದೆ. ಮುಖ್ಯವಾಗಿ ಏಕಶಿಲೆಯ ಸಾಲಿಗ್ರಾಮ ಶಿಲೆಯ ಶ್ರೀರಂಗನಾಥಸ್ವಾಮಿಯ ಮೂರ್ತಿಯು ತನ್ನ ಅಖಂಡ ಪ್ರಸನ್ನತೆಯಿಂದ, ನವಿರಾದ ಹೊಳಪಿನ ಕೆತ್ತನೆಯಿಂದ ಭಕ್ತರನ್ನು ಸೆಳೆಯುತ್ತದೆ.

ಸುಮಾರು ೯೦೦ ವರ್ಷಗಳ ಇತಿಹಾಸವಿರುವ ಈ ದೇಗುಲವು ಪ್ರತಿ ಶ್ರಾವಣ ಮಾಸದ ಶನಿವಾರ, ಭಾನುವಾರ ಹಾಗು ವೈಕುಂಠ ಏಕಾದಶಿಯಂದು, ವಿಶೇಷ ಹಬ್ಬ ಹರಿದಿನಗಳಲ್ಲಿ ರಂಗು ರಂಗಾಗಿ ರಂಗೇರಿರುತ್ತದೆ. ಪ್ರತಿ ವರ್ಷ ಡಿಸೇಂಬೇರ್ನಲ್ಲಿ ರಥೋತ್ಸವವು ಬಹಳ ವಿಜೃಂಭಣೆಯಿಂದ ಜರಗುತ್ತದೆ. ಮಕರ ಸಂಕ್ರಾಂತಿಯ ಸಂಕ್ರಮಣದಂದು ಸೂರ್ಯ ಕಿರಣಗಳು ಗರ್ಭಗುಡಿಯನ್ನು ಪ್ರವೇಶಿಸಿ ಶ್ರೀ ರಂಗನಾಥ ಸ್ವಾಮಿಯ ಪಾದಗಳನ್ನು ಸ್ಪರ್ಶಿಸುವ ವಿಸ್ಮಯ ಇಲ್ಲಿಯ ಮತ್ತೊಂದು ವಿಶೇಷ.

ಬೆಂಗಳೂರಿನಿಂದ 65 ಕಿಮಿ ದೂರದಲ್ಲಿರುವ ರಂಗಸ್ಥಳಕ್ಕೆ ಹೋಗಿ ಬರಲು ಚಿಕ್ಕಬಳ್ಳಾಪುರದಿಂದ ಸಾಕಷ್ಟು ಆಟೋಗಳ ಸೌಲಭ್ಯವಿದೆ. ಮಂಚೇನಹಳ್ಳಿ, ಗೌರೀಬಿದನೂರಿಗೆ ಹೋಗುವ ಬಸ್ಗಳಲ್ಲಿಯೂ ಇಲ್ಲಿಯ ಮುಖ್ಯರಸ್ತೆಯವರೆಗೂ ಬರಬಹುದು.

Also read: ತಿರುಪತಿಗೆ ಪದೇ ಪದೇ ಹೋಗಕ್ಕಾಗಾಗ್ತಿಲ್ಲ ಅಂತ ಯೋಚ್ನೆ ಮಾಡ್ಬೇಡಿ ಅಷ್ಟೇ ಮಹತ್ವ ಹೊಂದಿರುವ ಬೆಂಗಳೂರಿನ ವಸಂತಪುರದ ಪುರಾಣ ಪ್ರಸಿದ್ಧ ಶ್ರೀ ವಸಂತ ವಲ್ಲಭರಾಯನ ದರ್ಶನ ಮಾಡಿ…