ತಪ್ಪದೇ ಓದಿ, ನಾಲ್ಕು ಸಾಲಿನ ಸಂಭಾಷೆ ಸಾರುತ್ತೆ ಉತ್ತಮದ ಗೆಳೆತನದ ರಹಸ್ಯ

0
1733

ಕಪ್ಪೆ ಮತ್ತು ಮಿಡತೆ

ಬಹಳ ಹಿಂದಿನ ಮಾತು ಕಪ್ಪೆ ಮತ್ತು ಮಿಡತೆ ಬಹಳ ಒಳ್ಳೆಯ ಸ್ನೇಹಿತರಾಗಿದ್ದವು, ಅವೆರಡು ಯಾವಾಗಲೂ ಆಟಆಡುವುದನ್ನು ಜನ ನೋಡುತ್ತಿದ್ದರು ಆದರೆ ಅವೆರಡು ಒಂದು ದಿನವೂ ಒಬ್ಬರ ಮನೆಯಲ್ಲೊಬ್ಬರು ಔತಣ ಮಾಡಿರಲಿಲ್ಲ ಒಂದು ದಿನ ಕಪ್ಪೆ ಮಿಡತೆಗೆ ಓ ಗೆಳೆಯ ನಾಳೆ ರಾತ್ರಿ ನಮ್ಮ ಮನೆಗೆ ಔತಣಕ್ಕೆ ಬಂದು ಬಿಡು ನಾನು ನನ್ನ ಹೆಂಡತಿ ಸೇರಿ ನಿನಗೋಸ್ಕರ ಒಳ್ಳೆಯ ಅಡುಗೆ ಮಾಡಿರುತ್ತೇವೆ ಎಂದು ಹೇಳಿತು ಮಿಡತೆಯು ಸಂತೋಷದಿಂದ ಒಪ್ಪಿಕೊಂಡಿತು.

ಮರುದಿನ ರಾತ್ರಿಯಾಗುತ್ತಲೇ ಮಿಡತೆ ಕಪ್ಪೆಯ ಮನೆಗೆ ಔತಣಕ್ಕೆ ಬಂದಿತು. ಊಟಕ್ಕೆ ಕೂರುವ ಮೊದಲು ಕಪ್ಪೆ ತನ್ನ ಕಾಲನ್ನು ತೊಳೆದುಕೊಂಡಿತು ಹಾಗೂ ಮಿಡತೆಗೂ ಕಾಲು ತೊಳೆದುಕೊಳ್ಳಲು ಹೇಳಿತು ಮಿಡತೆ ಹಾಗೆಯೇ ಮಾಡಿತು. ರಾತ್ರಿಯಾಗಿದ್ದರಿಂದ ಮಿಡತೆ ತನ್ನ ಮುಂಗಾಲಿನಿಂದ ಬಾಯಿಯನ್ನು ಒರೆಸಿಕೊಳ್ಳುತ್ತಾ ಚಿರ್ಪ್ ಚಿರ್ಪ್ ಎಂದು ಕೂಗುತ್ತಿತ್ತು ಕಪ್ಪೆ ಮಿಡತೆಗೆ ನೀನು ಕೂಗುವುದನ್ನು ನಿಲ್ಲಿಸುವೆಯ ನೀನು ಹೀಗೆ ಕೂಗುತ್ತಿದ್ದರೆ ನನಗೆ ತಲೆನೋವು ಬರುತ್ತದೆ ಎಂದಿತು. ಆದರೆ ಪಾಪ ಮಿಡತೆಗೆ ಅಭ್ಯಾಸಬಲ ಮುಂಗಾಲಿನಿಂದ ಬಾಯಿಯನ್ನು ಉಜ್ಜುತ್ತಾ ತಿನ್ನುವಾಗಲೆಲ್ಲ ಅದು ಚಿರ್ಪ್ ಚಿರ್ಪ್ ಎಂದು ಸದ್ದು ಮಾಡುತ್ತಲೇ ಇತ್ತು. ಪ್ರತಿ ಬಾರಿ ಕೂಗಿದಾಗಲೂ ಕಪ್ಪೆ ಸುಮ್ಮನಿರುವಂತೆ ಹೇಳುತ್ತಿತ್ತು ಇದರಿಂದ ಮಿಡತೆಗೆ ಸರಿಯಾಗಿ ಊಟ ಮಾಡಲಾಗಲಿಲ್ಲ. ಅದಕ್ಕೆ ತುಂಬಾ ಕೋಪ ಬಂದಿತು ಊಟಕ್ಕೆ ಕರೆದು ಕಪ್ಪೆ ಅವಮಾನಿಸಿತ್ತಲ್ಲಾ ಎಂದು ಬೇಜಾರಾಯಿತು. ಮಾರನೆಯ ದಿನ ತನ್ನ ಮನೆಗೆ ಊಟಕ್ಕೆ ಬರಬೇಕೆಂದು ಕಪ್ಪೆಗೆ ಆಮಂತ್ರಣ ನೀಡಿತು.

ಮರುದಿನ ಮಿಡತೆಯ ಮನೆಗೆ ಕಪ್ಪೆ ಔತಣಕ್ಕೆ ಬಂದಿತು,ಊಟ ಸಿದ್ಧವಾದ ನಂತರ ಮಿಡತೆ ತನ್ನ ಕಾಲುಗಳನ್ನು ತೊಳೆದುಕೊಂಡಿತು, ಹಾಗೆಯೇ ಕಪ್ಪೆಗೂ ಕಾಲು ತೊಳೆದುಕೊಳ್ಳಲು ಹೇಳಿತು ಕಪ್ಪೆ ಕಾಲು ತೊಳೆದುಕೊಂಡು ನೆಗೆಯುತ್ತಾ ಊಟದ ಟೇಬಲ್‍ಗೆ ಬಂದಿತು ಆಗ ಮಿಡತೆ ನೀನು ನೆಗೆದುಕೊಂಡು ಬಂದಿದ್ದರಿಂದ ನಿನ್ನ ಮುಂಗಾಲು ಮತ್ತೆ ಕೊಳೆಯಾಗಿದೆ ನೀನು ಮತ್ತೊಮ್ಮೆ ಕಾಲು ತೊಳೆದುಕೊಂಡು ಬರುವುದು ಒಳಿತು ಎಂದಿತು ಮಿಡತೆ, ಅದಕ್ಕೆ ಕಪ್ಪೆ ಮತ್ತೆ ಬಚ್ಚಲಿಗೆ ಹಾರಿ ಕಾಲನ್ನು ತೊಳೆದುಕೊಂಡು ಮತ್ತೆ ಹಾರಿ ಟೇಬಲ್ ಬಳಿ ಬಂದು ಇನ್ನೇನು ಊಟಕ್ಕೆ ಕೈ ಹಾಕಬೇಕು!! ಕಪ್ಪೆಯನ್ನು ತಡೆದ ಮಿಡತೆ ನಿನ್ನ ಕೊಳಕು ಕೈಗಳನ್ನು ತಟ್ಟೆಗೆ ಹಾಕಬೇಡ ಅದು ಕೊಳೆಯಾಗಿದೆ ಮತ್ತೊಮ್ಮೆ ಕೈಕಾಲು ತೊಳೆದುಕೊಂಡು ಬಾ ಎಂದಿತು.

ಇದರಿಂದ ಕಪ್ಪೆಯ ಕೋಪ ನೆತ್ತಿಗೇರಿತು, ನೀನು ಊಟಕ್ಕೆ ಕರೆದು ನನ್ನನ್ನು ಅವಮಾನಿಸುತ್ತಿರುವೆ ನಾನು ಊಟ ಮಾಡಬಾರದೆಂದೆ ಹೀಗೆಲ್ಲ ಮಾಡುತ್ತಿರುವೆ ನಿನಗೆ ಗೊತ್ತು ನಾನು ನೆಗೆಯಲು ಮುಂಗಾಲು ಮತ್ತು ಹಿಂಗಾಲನ್ನು ಬಳಸಲೇಬೇಕು ಬಚ್ಚಲಿನಿಂದ ಊಟದ ಟೇಬಲಿಗೆ ಬಂದಾಗ ಅದು ಸ್ವಲ್ಪ ಕೊಳೆಯಾಗುತ್ತದೆ ಅದನ್ನು ನೀನು ಸಹಿಸಿಕೊಳ್ಳಬೇಕು ಎಂದಿತು ,ಅದಕ್ಕೆ ಮಿಡತೆ ಇದನ್ನು ನೀನೆ ಪ್ರಾರಂಭಿಸಿದ್ದು ನಾನು ಶಬ್ದವನ್ನು ಮಾಡದೆ ಮುಖವನ್ನು ನನ್ನ ಮುಂಗಾಲುಗಳಿಂದ ಒರೆಸಲು ಸಾಧ್ಯವಿಲ್ಲ! ಮೂತಿ ವರೆಸುವಾಗಲೊಮ್ಮೆ ನಾನು ಕಿರುಚಬೇಕು ಹೀಗೆ ವಾದ ವಿವಾದ ನಡೆಯುತ್ತಾ ಕಪ್ಪೆ ಕೋಪಗೊಂಡು ತನ್ನ ಉದ್ದ ನಾಲಗೆಯಿಂದ ಗಬಕ್ ಎಂದು ಮಿಡತೆಯನ್ನು ನುಂಗಿಬಿಟ್ಟಿತು. ಮಕ್ಕಳೆ ಈ ಕಥೆಯ ನೀತಿ ಇಷ್ಟೆ ಗೆಳೆಯರೆಂದ ಮೇಲೆ ದುರ್ಬಲ ಹಾಗೂ ಪ್ರಬಲ ಗುಣಗಳು ಇದ್ದೆ ಇರುತ್ತದೆ ಗೆಳೆಯರ ದುರ್ಬಲ ಗುಣಗಳನ್ನು ಎತ್ತಿ ತೋರಿಸದೆ ಅದನ್ನು ಒಪ್ಪಿಕೊಂಡು ಹೋದಾಗಲೆ ಉತ್ತಮ ಗೆಳೆತನ ಇರಲು ಸಾಧ್ಯ!!

ಪ್ರಕಾಶ್.ಕೆ.ನಾಡಿಗ್
ಶಿವಮೊಗ್ಗ