ಮಗುವಿನ ಜೊತೆ ಪೋಷಕರು ಮಲಗುವುದರಿಂದ ಆಗುವ ಸಮಸ್ಯೆಗಳೇನು ಗೊತ್ತೇ..?

0
2340

ಎಳೆ ಮಕ್ಕಳನ್ನು ಪಕ್ಕದಲ್ಲಿ ಮಲಗಿಸಿಕೊಂಡು ತಾವೂ ಮಲಗಲು ತಾಯಂದಿರು ಬಯಸುತ್ತಾರೆ. ಆದರೆ ಬೆಳೆಯುವ ನವಜಾತ ಶಿಶುಗಳು ಪೋಷಕರು ಮಲಗುವ ಹಾಸಿಗೆ ಸುರಕ್ಷಿತವಲ್ಲ ಎಂದು ಸಂಶೋಧನೆಯೊಂದು ಹೇಳಿದೆ. ಅಷ್ಟೇ ಅಲ್ಲದೇ, ಅರಿವಿಲ್ಲದೇ ಮಕ್ಕಳನ್ನು ತಪ್ಪಾದ ಭಂಗಿಯಲ್ಲಿ ಮಲಗಿಸಿ ಅಪಾಯವನ್ನು ಆಹ್ವಾನಿಸುವ ಬದಲು ಯಾವ ಭಂಗಿಯಲ್ಲಿ ಮಲಗಿಸಿದರೆ ಸೂಕ್ತ ಎಂಬುದನ್ನು ಪ್ರತಿ ತಾಯಂದಿರು ಅರಿತುಕೊಂಡಿರಬೇಕಾದ ವಿಷಯವಾಗಿದೆ.

ಮಗು ಯಾವುದೇ ಮಗ್ಗುಲಲ್ಲಿ ಮಲಗಿದರೂ ಇದು ಆರೋಗ್ಯಕ್ಕೆ ಮಾರಕವಾಗಿದೆ. ಏಕೆಂದರೆ ಈ ಭಂಗಿಯಲ್ಲಿ ದೇಹದ ಮುಖ್ಯ ಅಂಗಗಳ ಮೇಲೆ ಒತ್ತಡ ಬಿದ್ದು ಸಿಡ್ಸ್ ಎದುರಾಗುವ ಸಾಧ್ಯತೆ ಹೆಚ್ಚುತ್ತದೆ. ಮಗುವನ್ನು ಸುರಕ್ಷಿತವಾಗಿ ಮಲಗಿಸುವ ಭಂಗಿಗಳ ಬಗ್ಗೆ ಅರಿತುಕೊಳ್ಳುವ ಜೊತೆಗೇ ಯಾವ ಭಂಗಿಗಳಿಂದ ಸಿಡ್ಸ್ ಎದುರಾಗುವ ಸಾಧ್ಯತೆಗಳಿರುತ್ತವೆ ಎಂಬುದನ್ನೂ ತಿಳಿದುಕೊಂಡಿರುವುದು ಅಗತ್ಯ. ವಾಸ್ತವದಲ್ಲಿ ಸಿಡ್ಸ್ ಎಂಬುದು ಸುಡಿ (Sudden Unexpected Death In Infancy (SUDI) ಅಥವಾ ಅನಿರೀಕ್ಷಿತ ಶಿಶುಗಳು ಮರಣಕ್ಕೊಳಗಾಗುವುದು ಎಂಬ ಕಾಯಿಲೆಯ ಒಂದು ಭಾಗವಾಗಿದೆ.

ಮಗುವನ್ನು ಇತರರು ಮಲಗುವ ಹಾಸಿಗೆಯಲ್ಲಿ ಮಲಗಿಸದಿರಿ. ಸಾಮಾನ್ಯವಾಗಿ ತಾಯಂದಿರು ತಮ್ಮ ಹಾಸಿಗೆಯಲ್ಲಿಯೇ ಮಗುವನ್ನೂ ಮಲಗಿಸುತ್ತಾರೆ ಅಥವಾ ಇತರ ಮಕ್ಕಳೊಂದಿಗೆ ಮಲಗಿಸುತ್ತಾರೆ. ಆದರೆ ತಜ್ಞರ ಪ್ರಕಾರ ಮಗುವಿನ ಹಾಸಿಗೆ ಪ್ರತ್ಯೇಕವಾಗಿರಬೇಕು. ಒಂದು ವೇಳೆ ಅವಳಿ ಜವಳಿ ಮಕ್ಕಳಿದ್ದರೂ ಇಬ್ಬರ ಹಾಸಿಗೆಗಳೂ ಪ್ರತ್ಯೇಕವಾಗಿರಬೇಕು. ತಾಯಿ ಮಲಗುವ ಹಾಸಿಗೆಯಲ್ಲಿ ಮಗುವನ್ನು ಮಲಗಿಸಬಾರದು. ವಿಶೇಷವಾಗಿ ಪತಿಗೆ ಮದ್ಯಪಾನ, ಧೂಮಪಾನ ಅಥವಾ ಗಾಢ ನಿದ್ದೆಗೆ ದೂಡುವ ಔಷಧಿಇಗಳ ಸೇವನೆಯ ಅಭ್ಯಾಸವಿದ್ದರಂತೂ ಇವರೊಂದಿಗೆ ಮಗುವನ್ನೆಂದೂ ಮಲಗಿಸಬಾರದು. ಮಗು ಇರುವ ಕೋಣೆಯಲ್ಲಿ ಧೂಮಪಾನ ಅಥವಾ ಇತರ ಯಾವುದೇ ಮಾದಕ ಪದಾರ್ಥದ ವಾಸನೆ ಗಾಳಿಯಲ್ಲಿದ್ದರೂ ಇದು ಈ ಹಾಸಿಗೆಯಲ್ಲಿ ಮಲಗಿರುವ ಮಗು ಸಿಡ್ಸ್ ಗೆ ಒಳಗಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಸುಡಿ ಎದುರಾಗದೇ ಇರಲು ಮಕ್ಕಳನ್ನು ಮಲಗಿಸುವಾಗ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು. ಎಂದಿಗೂ ಮಕ್ಕಳನ್ನು ಎಡ ಅಥವಾ ಬಲ ಮಗ್ಗುಲಲ್ಲಿ ಮಲಗಿಸಬಾರದು. ಮಕ್ಕಳನ್ನು ಅತಿಯಾದ ಮೃದುವಾಗಿರುವ ಹಾಸಿಗೆಗಳ ಮೇಲೆ ಮಲಗಿಸಬಾರದು. ಮಲಗಬಾರದ ಸ್ಥಳಗಳಲ್ಲಿಯೂ ಮಲಗಿಸಬಾರದು. ಉದಾಹರಣೆಗೆ ಸೋಫಾ, ನೀರಿನ ಹಾಸಿಗೆ, ದಿಂಬಿನ ಮೇಲೆ ಅಥವಾ ನೆಲದ ಕಂಬಳಿಯ ಮೇಲೆ ಅಂದರೆ ಕಂಬಳಿಗಳು (ಪ್ರಾಣಿಗಳ ಚರ್ಮದ ಉತ್ಪನ್ನಗಳು) ಅತೀವ ಮಾರಕವಾಗಿವೆ. ಈ ಸ್ಥಳಗಳಲ್ಲಿ ತಾಯಿ ಹತ್ತಿರ ಇದ್ದರೂ ಸರಿ, ಇರದಿದ್ದರೂ ಸರಿ, ಮಗುವನ್ನು ಮಲಗಿಸಬಾರದು. ಮಗುವಿಗೆ ಹೊದಿಸುವ ಹೊದಿಗೆ ಕುತ್ತಿಗೆಯ ಮಟ್ಟಕ್ಕಿಂತ ಮೇಲಿರಬಾರದು. ಏಕೆಂದರೆ ಅಕಸ್ಮಿಕವಾಗಿ ಹೊದಿಕೆ ಮೂಗಿಗೆ ಅಡ್ಡವಾಗಿ ಉಸಿರಾಟಕ್ಕೆ ತೊಂದರೆಯುಂಟುಮಾಡಬಹುದು. ಗರ್ಭಾವಸ್ಥೆಯಲ್ಲಿದ್ದಾಗಲಾಗಲೀ, ಮಗು ಹತ್ತಿರವಿದ್ದಾಗಲಾಗಲೀ ತಾಯಿ ಎಂದಿಗೂ ಧೂಮಪಾನ ಮಾಡಬಾರದು, ಅಷ್ಟೇ ಅಲ್ಲ ಮಗು ಇರುವ ಸ್ಥಳದಲ್ಲಿ ಇತರರೂ ಧೂಮಪಾನ ಮಾಡದಂತೆ ಕ್ರಮ ಕೈಗೊಳ್ಳಬೇಕು. ಕೇವಲ ಸಿಗರೇಟಿನ ಧೂಮ ಮಾತ್ರವಲ್ಲ, ಅಗರಬತ್ತಿ, ಸೊಳ್ಳೆಬತ್ತಿ ಮೊದಲಾದ ಹೊಗೆಗಳೂ ಮಗುವಿನ ಸೂಕ್ಷ್ಮ ಶ್ವಾಸಕೋಶಗಳಿಗೆ ಮಾರಕವಾಗಿವೆ.

ಇನ್ನು ಅಮೇರಿಕಾದ ಶಿಶುತಜ್ಞರ ಅಕಾಡೆಮಿಯ ಪ್ರಕಾರ ಸಿಡ್ಸ್ ಎದುರಾಗದಂತೆ ನೋಡಿಕೊಳ್ಳಲು ಪೇಸಿಫೈಯರ್ ಅಥವಾ ನಿಪ್ಪಲ್ ನೀಡಬಹುದು. ಆದರೆ ಮಗುವಿಗೆ ಇಷ್ಟವಿಲ್ಲದೇ ಅಥವಾ ಮಗು ಮಲಗಿದ್ದಾಗ ಬಾಯಿಯಿಂದ ಹೊರಬಿದ್ದರೆ ಮತ್ತೆ ಬಾಯಿಗೆ ತುರುಕಿಸದಿರಿ. ಒಂದು ವೇಳೆ ಮಗುವಿನ್ನೂ ತಾಯಿಹಾಲನ್ನೇ ಕುಡಿಯುತ್ತಿದ್ದರೆ ಅನಗತ್ಯವಾಗಿ ನಿಪ್ಪಲು ನೀಡದಿರಿ. ತಾಯಿಹಾಲು ಕುಡಿಯುವ ಪ್ರಮಾಣ ಕೊಂಚ ಕಡಿಮೆಯಾದ ಬಳಿಕವೇ ನಿಪ್ಪಲು ಕೊಡಲು ಪ್ರಾರಂಭಿಸಿ. ಸಾಮಾನ್ಯವಾಗಿ ಮಗು ತಾಯಿಹಾಲನ್ನು ಸರಾಗವಾಗಿ ಕುಡಿಯಲು ಪ್ರಾರಂಭಿಸಲು ಜನನದಿಂದ ಸುಮಾರು ಮೂರರಿಂದ ನಾಲ್ಕು ವಾರಗಳೇ ಬೇಕಾಗಬಹುದು. ತಾಯಿ ಇರುವ ಕೋಣೆಯಲ್ಲಿಯೇ ಮಗುವನ್ನು ಮಲಗಿಸಬೇಕು. ಮಗುವಿಗೆ ಅಗತ್ಯವಿರುವಾಗಲೆಲ್ಲಾ ತಾಯಿ ಹಾಲು ಕುಡಿಸಲು ಸಾಧ್ಯವಾಗುವಂತೆ ಒಂದೇ ಕೋಣೆಯಲ್ಲಿ ಮಗುವನ್ನು ಮಲಗಿಸಿಕೊಳ್ಳಿ. ಮಗು ಮಲಗುವ ತೊಟ್ಟಿಲು ಸಹಾ ತಂದೆ ತಾಯಿಯರ ಕೋಣೆಯಲ್ಲಿಯೇ ಹತ್ತಿರದಲ್ಲಿಯೇ ಇರಲಿ ಎಂದು ತಜ್ಙರು ಹೇಳುತ್ತಾರೆ.

Also read: ಗರ್ಭಿಣಿಯರು ಮತ್ತು ಮಗುವಿಗೆ ಮೊಲೆಯುಣಿಸುವ ತಾಯಂದಿರು ಈ ವಿಷಯಗಳನ್ನು ನೆನಪಿಟ್ಟುಕೊಂಡಲ್ಲಿ ಮಾತೃತ್ವ ಒಂದು ಸುಮಧುರ ಅನುಭವವಾಗುವದರಲ್ಲಿ ಸಂಶಯವೇ ಇಲ್ಲ…