ಜಮ್ಮು-ಕಾಶ್ಮೀರದಲ್ಲಿ ಅಮರನಾಥ ಯಾತ್ರಿಗಳ ಹತ್ಯೆ ನಡೆದಿದೆ. ಪಾಕಿಸ್ತಾನ ಗಡಿಯಲ್ಲೂ ವಾತಾವರಣ ಹದಗೆಟ್ಟಿದೆ. ಮತ್ತು ಚೀನಾ ಒಂದು ಕಡೆ ಪದೇ ಪದೇ ಖ್ಯಾತೆ ತೆಗೆಯುತಿದೆ.ಇಂತಹ ಸಮಯದಲ್ಲೇ ಮೋದಿ ಸರ್ಕಾರ ಸೇನೆಗೆ ವಿಶೇಷ ಅಧಿಕಾರ ನೀಡುವ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.ತುರ್ತು ಶಸ್ತ್ರಾಸ್ತ್ರಗಳ ಖರೀದಿಗೆ ಕೇಂದ್ರ ಸರ್ಕಾರ ಸೇನೆಗೆ ಅಧಿಕಾರ ನೀಡಿದೆ ಎಂದು ರಾಷ್ಟ್ರೀಯ ಪತ್ರಿಕೆಗಳು ವರದಿ ಮಾಡಿವೆ.
15 ದಿನಗಳ ಕಿರು ಯುದ್ಧ ನಡೆಸಲು ಸೇನೆ ಸನ್ನದ್ಧವಾಗಿರಲು ಕೊರತೆಯಿರುವುದು ಆಂತರಿಕ ಪರಿಶೀಲನೆಯಿಂದ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರಗಳು ಹಾಗೂ ಹಲವು ಶಸ್ತ್ರಾಸ್ತ್ರಗಳ ಬಿಡಿ ಭಾಗಗಳನ್ನ ಖರೀದಿಸಲು ಸರ್ಕಾರ ಸೇನೆಗೆ ಅಧಿಕಾರ ನೀಡಿದೆ. ಫಿರಂಗಿಗಳು, ಟ್ಯಾಂಕ್ ಶೆಲ್ಗಳು, ಫ್ಯೂಸ್ಗಳು ಹಾಗೂ ಶಸ್ತ್ರಾಸ್ತ್ರಗಳ ಬಿಡಿ ಭಾಗಗಳ ಕೊರತೆ ಇರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸೇನೆಯು 46 ರೀತಿಯ ಯುದ್ಧಸಾಮಗ್ರಿ, 10 ಶಸ್ತ್ರಾಸ್ತ್ರಗಳ ಬಿಡಿಭಾಗಗಳನ್ನ ಗುರುತಿಸಿದೆ. ಈ ಎಲ್ಲಾ ಯುದ್ಧ ಪರಿಕರಗಳನ್ನ ತುರ್ತು ಖರೀದಿ ಮಾರ್ಗದಲ್ಲಿ ಖರೀದಿಸಬಹುದಾಗಿದೆ. ಉಪ ಸೇನಾ ಮುಖ್ಯಸ್ಥರಿಗೆ ಹಣಕಾಸು ಪರಮಾಧಿಕಾರ ಕೊಟ್ಟು ಮೋದಿ ಸರ್ಕಾರ ಆದೇಶ ನೀಡಿದೆ. ಇದರಿಂದಾಗಿ 40 ಸಾವಿರ ಕೋಟಿ ರೂಪಾಯಿ ಮೊತ್ತದ ಶಸ್ತ್ರಾಸ್ತ್ರ ಖರೀದಿಗೆ ಸ್ವತಃ ಉಪ ಸೇನಾ ಮುಖ್ಯಸ್ಥರೇ ಆದೇಶ ನೀಡಬಹುದಾಗಿದೆ.