ಇನ್ಮೇಲೆ ಕ್ಯಾಬ್ ಡ್ರೈವರ್-ಗಳು ಎಂಟು ಘಂಟೆ ಮೇಲೆ ಕೆಲಸ ಮಾಡೋಹಾಗಿಲ್ಲ, ಇದು ಒಳ್ಳೆದಾ ಕೆಟ್ಟದ್ದಾ??

0
1252

ಮನುಷ್ಯನೊಬ್ಬ ದಿನಕ್ಕೆ ಎಂಟು ಗಂಟೆ ಮಾತ್ರ ಕೆಲಸ ಮಾಡಬೇಕು ಎನ್ನುವ ನಿಯಮವಿದೆ. ಎಂಟು ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡಿದರೆ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆದಲ್ಲ ಅಂತಾರೆ ತಜ್ಞರು. ಆದರೆ ಯಾರು ರೂಲ್ಸ್ ಫಾಲೋ ಮಾಡುತ್ತಿಲ್ಲ.

ಇನ್ನು ಕ್ಯಾಬ್ ಚಾಲಕರ ಕಥೆ ಕೇಳ್ಬೇಕಾ.. ಅವರಿಗೆ ಇಂಚಿಷ್ಟೇ ಸಮಯದಲ್ಲಿ ಕೆಲಸ ಮಾಡ್ಬೇಕು ಅಂತೇನಿಲ್ಲ. ಪಿಕಪ್-ಡ್ರಾಪ್ ಟೇರಿಪ್ ಇದ್ದಂತೆ ಕೆಲಸ ಮಾಡುತ್ತಾರೆ. ಅದೆಷ್ಟೋ ಜನ ನಿದ್ದೆ ಬಿಟ್ಟು ಡ್ಯೂಟಿ ಮಾಡ್ತಾರೆ.

ಇದರಿಂದ ಕ್ಯಾಬ್ ಡ್ರೈವರ್ಸ್ ಆರೋಗ್ಯಕ್ಕೂ ಒಳ್ಳೆಯದಲ್ಲ, ಒಂದಲ್ಲ ಒಂದು ಅಪಾಯಕ್ಕೆ ಕಾರಣವೂ ಹೌದು. ನಿತ್ಯ ನಾವ್ ನ್ಯೂಸ್ ಕೇಳ್ತಿರ್ತೀವಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತ, ಚಾಲಕ ನಿದ್ದೆಗಣ್ಣಿನಲ್ಲಿ ವಾಹನ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಅಂತ. ಚಾಲಕನ ತಪ್ಪಿಂದ ವಾಹನದಲ್ಲಿದ್ದ ಪ್ರಯಾಣಿಕರಿಗೂ ಅಪಾಯ ಅಲ್ವಾ…

ಅದಕ್ಕೆ ರಾಜ್ಯಾದ್ಯಂತ ಹೆಚ್ಚುತ್ತಿರುವ ಅಪಘಾತ ಪ್ರಕರಣಕ್ಕೆ ಬ್ರೇಕ್‌ ಹಾಕಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ. ಪ್ರವಾಸಿ ಕ್ಯಾಬ್‌ ಹಾಗೂ ಮ್ಯಾಕ್ಸಿ ಕ್ಯಾಬ್‌ ಚಾಲಕರು ಇನ್ನು ಮುಂದೆ ಕೇವಲ ಎಂಟು ಗಂಟೆ ಕೆಲಸ ನಿರ್ವಹಿಸಬೇಕು. ತಮಿಳುನಾಡು ಸರ್ಕಾರ ಮತ್ತು ರಾಜ್ಯ ಸಾರಿಗೆ ಇಲಾಖೆ ಜಂಟಿಯಾಗಿ ಸೂಚಿಸಿವೆ.

ಪ್ರವಾಸಿ ಕ್ಯಾಬ್‌ ಮತ್ತು ಮ್ಯಾಕ್ಸಿ ಕ್ಯಾಬ್‌ ಚಾಲಕರು ಪ್ರತಿದಿನ ಎಂಟು ಗಂಟೆಯಷ್ಟೇ ಕೆಲಸ ಮಾಡಬೇಕು, ವಾರದಲ್ಲಿ ಒಂದು ದಿನ ರಜೆ ತೆಗೆದುಕೊಳ್ಳಬೇಕು. ಜೊತೆಗೆ ವಾರ್ಷಿಕ ವೈದ್ಯಕೀಯ ತಪಾಸಣೆ ವರದಿ ಪತ್ರ ಮತ್ತು ಜೀವ ವಿಮೆ ಪತ್ರ ಪಡೆಯಬೇಕು ಎಂದು ಸೂಚಿಸಲಾಗಿದೆ.

ಈ ಸಂಬಂಧ ರಸ್ತೆ ಸಂಚಾರಿ ಆಯುಕ್ತರು ಕಳೆದ ಬುಧವಾರ ನೋಟಿಸ್‌ ಜಾರಿ ಮಾಡಿದೆ. 1988ರ ಮೋಟಾರ್ ವಾಹನ ಕಾಯ್ದೆ ಮತ್ತು ಸಂಚಾರಿ ವಾಹನಗಳ ಕಾರ್ಮಿಕರ ಕಾಯ್ದೆ 1961ರ ನಿಬಂಧನೆಗಳ ಪ್ರಕಾರ ಈ ನಿಯಮವನ್ನು ತರಲಾಗಿದೆ ಎಂದು ತಿಳಿಸಿದೆ.

ತಮಿಳುನಾಡಿನಂತೆಯೇ ಕರ್ನಾಟಕ್ಕೂ ಈ ರೀತಿ ಆದೇಶ ಹೊರಡಿಸಿದರೆ, ಅಪಘಾತಗಳ ಸಂಖ್ಯೆ ಕಡಿಮೆ ಆಗೋದು ಗ್ಯಾರೆಂಟಿ.