12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ತ್ರಯಂಬಕೇಶ್ವರ ದೇವಸ್ಥಾನದ ಸ್ಥಳ ಪುರಾಣದ ಬಗ್ಗೆ ನಿಮಗೆಷ್ಟು ಗೊತ್ತು?

0
2196

ತ್ರಿಂಬಕೇಶ್ವರ ಅಥವಾ ತ್ರಯಂಬಕೇಶ್ವರ ದೇವಸ್ಥಾನ 12 ಜ್ಯೋತಿರ್ಲಿಂಗಗಳಲ್ಲಿ ಒಂದು ಹಾಗು ಇದು ಇರುವುದು ಮಹಾರಾಷ್ಟ್ರ ರಾಜ್ಯದ, ನಾಸಿಕ್ ಎಂಬ ಜಿಲ್ಲೆಯ ತ್ರಿಂಬಕ್ ಎಂಬ ಪಟ್ಟಣದಲ್ಲಿ. ಈ ಜ್ಯೋತಿರ್ಲಿಂಗದ ದರ್ಶನದಿಂದ ಪಾಪಗಳು ಕಳೆದುಹೋಗಿ ಪುಣ್ಯಲಭಿಸುವುದೆಂದು ಮತ್ತು ಮುಕ್ತಿ ದೊರಕುವುದು ಎಂದು ನಂಬಲಾಗಿದೆ.

source: thehindu.com

ಇಲ್ಲಿನ ಜ್ಯೋತಿರ್ಲಿಂಗದ ವಿಶೇಷ ಎಂದರೆ ಮೂರು ತ್ರಿಮೂರ್ತಿಗಳ ಮುಖವನ್ನು ಒಂದೇ ಲಿಂಗದ ಮೇಲೆ ಲಿಂಗಗಳ ರೂಪದಲ್ಲೇ ಕೆತ್ತಲಾಗಿದೆ. ಇಲ್ಲಿ ಕುಸವರ್ತ ಎಂಬ ಪವಿತ್ರವಾದ ಕಲ್ಯಾಣಿ ಹರಿಯುತ್ತಿದೆ ಹಾಗು ಈ ಕಲ್ಯಾಣಿ ಗೋದಾವರಿ ನದಿಯ ಉಪನದಿ ಯಾಗಿದೆ. ಈ ನದಿಯು ದೇವಸ್ಥಾನದ ಒಳಗೆ ಬಂದು ಮೂಲ ದೇವರ ಲಿಂಗದ ಮೇಲೆ ಹರಿದು ಹೋಗುತ್ತದೆ.

source: media-cdn.tripadvisor.com

ತ್ರಯಂಬಕೇಶ್ವರ ದೇವಸ್ಥಾನದ ಸ್ಥಳ ಪುರಾಣ

ಈ ಪ್ರದೇಶಗಳಲ್ಲಿ ಗೌತಮ ಋಷಿಗಳು ತಮ್ಮ ಪತ್ನಿಯಾದ ಅಹಲ್ಯೆಯ ಜೊತೆ ತಮ್ಮ ಶಿಷ್ಯರೊಂದಿಗೆ ನೆಲೆಸಿದ್ದರು. ಅಚಾನಕವಾಗಿ ಬಹಳ ವರ್ಷಗಳು ಮಳೆಯಾಗದೆ ಬರಗಾಲ ಉಂಟಾಯಿತು. ಗೌತಮರು ವರುಣನನ್ನು ಕುರಿತು ತಪಸ್ಸು ಮಾಡಿದರು. ವರುಣ ಅವರ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾಗಿ, ಗೌತಮರ ಆಶಯದಂತೆ ಅಲ್ಲಿ ಮಳೆ ಸುರಿಸತೊಡಗಿದ. ಆ ಮಳೆಯಿಂದ ಗೌತಮರು ಬೆಳಿಗ್ಗೆ ಅಕ್ಕಿ ಬಿತ್ತಿ, ಮಧ್ಯಾಹ್ನದ ಹೊತ್ತಿಗೆ ಫಸಲು ಕುಯ್ದು ತಮ್ಮ ಶಿಷ್ಯರಿಗೆ ಉಣಬಡಿಸತೊಡಗಿದರು. ಇದರಿಂದ ಅಕ್ಕಪಕ್ಕದ ಆಶ್ರಮದಿಂದಲೂ ಋಷಿಗಳು ಇಲ್ಲಿಗೇ ಬಂದರು. ಅವರೆಲ್ಲರ ಆಶೀರ್ವಾದದಿಂದ ಗೌತಮರ ಪುಣ್ಯ ಏರತೊಡಗಿತು. ಇಂದ್ರನಿಗೆ ಹೆದರಿಕೆ ಆಯಿತು. ಅವನು ಎಲ್ಲಾ ಕಡೆ ಮಳೆ ಸುರಿಯುವ ಹಾಗೆ ಮಾಡಿದ. ಅದರಿಂದ ಹೊರಗಿನಿಂದ ಬಂದಿದ್ದ ಋಷಿಮುನಿಗಳು ತಮ್ಮ ಆಶ್ರಮಕ್ಕೆ ಹೋಗಲು ಅನುವಾದರು. ಆದರೆ ಗೌತಮರು ಅವರನ್ನು ಅಲ್ಲಿಯೇ ಇರಲು ಕೇಳಿಕೊಂಡರು.

source: 4.bp.blogspot.com

ಒಂದು ದಿನ ಗೌತಮರು ತಮ್ಮ ಹೊಲ ನೋಡುತ್ತಿದ್ದಾಗ, ಒಂದು ಹಸು ಫಲಸನ್ನು ಹಾಳು ಮಾಡುತ್ತಿದ್ದುದು ಕಂಡರು. ಅವರು ಒಂದು ದರ್ಬೆಯನ್ನು ಅದರ ಮೇಲೆ ಎಸೆದು ಅದನ್ನು ಹೆದರಿಸಿ ಓಡಿಸುವ ಪ್ರಯತ್ನ ಪಟ್ಟರು. ಆದರೆ ಆ ಹಸು ಸತ್ತುಹೋಯಿತು. ಇದನ್ನು ಕಂಡ ಅವರ ಶಿಷ್ಯ ಮತ್ತು ಇತರೆ ಋಷಿಮುನಿಗಳು ಅವರ ಮೇಲೆ ಕೋಪಗೊಂಡು ಹೋಗಲು ಅನುವಾದರು. ಆದರೆ ಗೌತಮರು ಅವರನ್ನು ಒಲಿಸಿಕೊಂಡು ಇದಕ್ಕೆ ಪರಿಹಾರ ಹೇಳಬೇಕೆಂದು ಬೇಡಿಕೊಂಡರು. ಅವರೆಲ್ಲರೂ ಶಿವನನ್ನು ಒಲಿಸಿಕೊಂಡು ಗಂಗೆಯನ್ನು ತರಿಸಿಕೊಂಡು ಅದರಲ್ಲಿ ಸ್ನಾನ ಮಾಡಿ ತಮ್ಮ ಗೋಹತ್ಯಾ ದೋಷದಿಂದ ಮುಕ್ತರಾಗಬಹುದೆಂದು ಸೂಚಿಸಿದರು.

source: youtube.com

ಅದರಂತೆ ಗೌತಮರು ತಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡರು. ಆದರೆ ಗಂಗೆ ಜಟೆಯಿಂದ ಹೊರಬರಲು ತಯಾರಿರಲಿಲ್ಲ. ಅದರಿಂದ ಕೋಪಗೊಂಡ ಶಿವ ತನ್ನ ಜಟೆಯನ್ನು ಬಿಚ್ಚಿ ಕೊಡಹಿದ. ಅದರಿಂದ ಗಂಗೆ ಬ್ರಹ್ಮಗಿರಿಯಲ್ಲಿ ಅಲ್ಲಲ್ಲಿ ಹನಿಯಾಗಿ ಬಿದ್ದಳು. ಗೌತಮರು ಗಂಗೆಯನ್ನು ಸ್ತುತಿಸಿದರು. ಗಂಗೆ, ಗಂಗಾಧರ, ವರಾಹ, ತೀರ್ಥ ಮುಂತಾದ ಕಡೆ ಕಾಣಿಸಿಕೊಂಡರೂ ಗೌತಮರಿಗೆ ಸ್ನಾನ ಮಾಡಲು ಆಗಲಿಲ್ಲ. ಗೌತಮರು ಕುಶದಿಂದ ಇವನ್ನೆಲ್ಲಾ ಸೇರಿಸಿದರು. ಅದೇ ಕುಶಾವರ್ಥವಾಯಿತು. ಗೌತಮರು ಅದರಲ್ಲಿ ಮಿಂದು ತಮ್ಮ ಗೋಹತ್ಯಾ ದೋಷದಿಂದ ಮುಕ್ತರಾದರು. ಇಲ್ಲಿಂದಲೇ ನಿಜವಾಗಿ ಗೋದಾವರಿ ಅಥವಾ ಗೌತಮಿ ಅಥವಾ ಗಂಗಾ ನದಿ ಉಗಮವಾಗುವುದು ಎನ್ನುತ್ತಾರೆ.ಇದೇ ರೀತಿಯ ಅನೇಕ ಕತೆಗಳಿವೆ. ಎಲ್ಲದರಲ್ಲೂ ಕೊನೆಗೆ ಗೌತಮರು ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಅಲ್ಲಿಯೇ ನೆಲೆಸಲು ಬೇಡಿಕೊಂಡಿದ್ದ-ರಿಂದ ಅಲ್ಲಿಯೇ ನೆಲೆಸಿದರು. ಆದ್ದರಿಂದ ಅದಕ್ಕೆ ತ್ರಯಂಬಕೇಶ್ವರ ಎಂದು ಹೆಸರಾಯಿತು ಎನ್ನುತ್ತಾರೆ.

ತ್ರಯಂಬಕೇಶ್ವರ ದೇವಸ್ಥಾನದ ಇತಿಹಾಸ:

ಎಲ್ಲಾ ಹಳೆಯ ದೇವಸ್ಥಾನಗಳ ತರಹವೇ ಮೊದಲ ಜ್ಯೋತಿರ್ಲಿಂಗದ ದೇವಸ್ಥಾನವನ್ನು ಯಾರು ಕಟ್ಟಿಸಿದರು ಎಂದು ಎಲ್ಲೂ ಉಲ್ಲೇಖ ಸಿಗುವುದಿಲ್ಲ. ಆದರೆ ಈಗಿರುವ ದೇವಸ್ಥಾನವನ್ನು ಪೇಶ್ವೆ ಬಾಲಾಜಿರಾವ್ (ನಾನಾ ಸಾಹೇಬ್) ಅವರು 1755 ಮತ್ತು 1768ರ ನಡುವೆ ಆಗಿನ ಕಾಲದಲ್ಲೇ 16 ಲಕ್ಷ ರೂಪಾಯಿ ಖರ್ಚು ಮಾಡಿ ಕಟ್ಟಿಸಿದರು ಎಂದು ತಿಳಿದು ಬರುತ್ತದೆ.

Also read: ಧಾರ್ಮಿಕ ಹಿನ್ನೆಲೆಯನ್ನು ಹೊಂದಿದ ಉಜ್ಜಿರೆ ‘ಸೂರ್ಯ ದೇವಸ್ಥಾನ’ದ ವಿಶಿಷ್ಟ ಧಾರ್ಮಿಕ ಆಚರಣೆ ಹಿನ್ನಲೆಯ ಬಗ್ಗೆ ತಿಳಿದುಕೊಳ್ಳಿ