ತಾಯಿ ಎಂಬ ಎರಡು ಪದದಲ್ಲಿ ಅಸಾಧ್ಯವಾದ ತ್ಯಾಗವಿದೆ

0
2945

ಒಂದೂರಿನಲ್ಲಿ ಒಕ್ಕಣ್ಣ ವಿಧವಾ ಸ್ತ್ರೀಯೊಬ್ಬಳು ತನ್ನ ಪುಟ್ಟ ಮಗುವಿನೊಂದಿಗೆ ವಾಸವಾಗಿದ್ದಳು. ಪ್ರತೀ ದಿನ ಮುಂಜಾನೆ ಎದ್ದು ಅಕ್ಕಪಕ್ಕದ ಮನೆಗಳಲ್ಲಿ ಮುಸುರೆ ತಿಕ್ಕಿ ತನ್ನ ಮಗುವಿನ ಭವಿಷ್ಯ ಕಟ್ಟಲು ಪ್ರಯತ್ನಿಸುತ್ತಿದ್ದಳು.

ಹೀಗೆ ಕಾಲಚಕ್ರ ಉರುಳುತಿತ್ತು. ಮಗು ಬೆಳೆದು ಪ್ರೌಡಾವಸ್ಥೆ ತಲುಪಿತು.ಮಗು ತಾಯಿಯ‌ಬಳಿ “ಅಮ್ಮ ನಿನ್ನ ಒಂದು ಕಣ್ಣಿಗೆ ಏನಾಯಿತು” ಕೇಳಿದಾಗ, ಏನೋ ಒಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಿದ್ದಳು. ಆ ತಾಯಿಗೆ ತನ್ನ ಮಗ ತಾನು ಪಟ್ಟ ಕಷ್ಟ ಪಡದೆ, ಜೀವನದಲ್ಲಿ ಒಬ್ಬ ಸ್ಥಿತಿವಂತನಾಗಬೇಕೆಂಬ ಹಂಬಲ ಮನಸ್ಸೊಳಗೆ ತಳವೂರಿತ್ತು.ಅದಕ್ಕಾಗಿ ಮಗನಿಗೆ ಯಾವುದಕ್ಕೂ ಕೊರತೆ ಬರದಂತೆ ನೋಡಿಕೊಳ್ಳುತ್ತಿದ್ದಳು.

ಮಗು ಹಠ ಮಾಡಿತೆಂದು ಅವರಿವರ ಬಳಿ ಸಾಲ ಮಾಡಿ ಸೈಕಲ್ ಕೊಡಿಸಿದ್ದೂ ಆಯ್ತು. ಹೀಗಿರುವಾಗ ಒಂದು ದಿನ ತಾಯಿ ತನ್ನ ಮಗನ ಶಾಲೆಗೆ ತೆರಳಿ ಮಗುವಿನ ವಿಧ್ಯಾಬ್ಯಾಸದ ಕುರಿತು ಶಿಕ್ಷಕರ ಜೊತೆ ಮಾತಾಡಿ ಬಂದಳು. ಸಂಜೆ ಮನೆಗೆ ಬಂದ ಮಗ ಜೋರಾಗಿ ಕಿರುಚಿ ರಂಪಾಟ ಮಾಡಿದ. ಆ ತಾಯಿ ಮಗನಲ್ಲಿ ಯಾಕೆ ಏನಾಯಿತು ಅಂತ ಕೇಳುವಾಗ “ಅಮ್ಮಾ ನೀನಿನ್ನು ನನ್ನ ಶಾಲೆಗೆ ಬರಕೂಡದು.ನನ್ನ ಸಹಪಾಠಿ ವಿಧಾರ್ಥಿಗಳೆಲ್ಲಾ ನಿನ್ನ ಒಕ್ಕಣ್ಣು ನೋಡಿ ತಮಾಷೆ ಮಾಡುತ್ತಾರೆ” ಎಂದು ಹೇಳಿಬಿಟ್ಟ.

ತಾಯಿಗೆ ಮನಸ್ಸೊಳಗೆ ಅತೀವ ನೋವಾದರೂ ತನ್ನ ಮಗುವಿಗೆ ಮುಜುಗರ ಆಗಬಾರದೆಂಬ ಕಾರಣಕ್ಕೆ ಇನ್ನು ಶಾಲೆಗೆ ಬರಲಾರೆ ಎಂದು ಸಮಾದಾನಿಸಿದಳು. ಮಗು ಬೆಳೆದು ಕಾಲೇಜ್ ಸೇರಿದ.ಈಗ ತನಗೆ ಬೈಕ್ ಬೇಕೆಂದು ಹಠ ಮಾಡತೊಡಗಿದ.ಕೈಯಲ್ಲಿ ನಯಪೈಸೆ ಇಲ್ಲದ ಆ ತಾಯಿ ತನ್ನ ಕತ್ತಿನಲ್ಲಿದ್ದ ಸರವನ್ನೂ ಮಾರಿ ಮಗನಿಗೊಂದು ಬೈಕ್ ತೆಗೆದು ಕೊಟ್ಟಳು.

ಮಗ ಕಾಲೇಜ್ ಮುಗಿಸಿ ಒಂದು ‌ಕಂಪನಿಯಲ್ಲಿ ಕೆಲಸಕ್ಕೆ ಸೇರಿದ. ಒಳ್ಳೆಯ ಸಂಬಳ ಕೂಡ ಬರುತಿತ್ತು.ಇನ್ನು ತನ್ನ ಮಗನಿಗೆ ಮದುವೆ ಮಾಡಿಸಿ ತನ್ನ ಕರ್ತವ್ಯದಿಂದ ಮುಕ್ತಿ ಪಡೆಯಬೇಕೆಂದು ಕೊಂಡಳು.ಅದೇ ರಾತ್ರಿ ಮನೆಗೆ ಬಂದ ಮಗನೊಡನೆ ಈ ವಿಚಾರ ಮಾತಾಡಿದಳು.

daddys-mother-is-a-beautiful-world-3

ಆಗ ಮಗ ತಾನು ತನ್ನ ಕಂಪನಿಯಲ್ಲೆ ಕೆಲಸ ಮಾಡುವ ಯುವತಿಯೊಬ್ಬಳನ್ನು ಪ್ರೀತಿಸುವುದಾಗಿಯೂ ಅವಳನ್ನೇ ಮದುವೆಯಾಗುವುದಾಗಿಯೂ ಹೇಳಿಬಿಟ್ಟ. ಸರಿ ವಯಸ್ಸಿಗೆ ಬಂದ ಮಗನಿಗೆ ಎದುರು ಮಾತಾಡಿ ಮನಸ್ಸು ನೋಯಿಸುವುದು ಬೇಡವೆಂದು ಅದಕ್ಕೂ ಒಪ್ಪಿಗೆ ನೀಡಿದಳು. ಮಗನ ಇಚ್ಛೆಯಂತೆ ಅದೇ ಹುಡುಗಿ‌ ಜತೆ ಮದುವೆ ನಡೆಯಿತು.

ಮೊದ ಮೊದಲು ಸರಿಯಾಗೇ ಇದ್ದ ಸೊಸೆ ಸ್ವಲ್ಪದಿನ ಕಳೆದಂತೆ ಬೇರೆ ಮನೆ ಮಾಡುವಂತೆ ತನ್ನ ಗಂಡನನ್ನು ದಿನವೂ ಪೀಡಿಸುತ್ತಿದ್ದಳು. ಈಗಂತು ಕೈಯಲ್ಲೊಂದಷ್ಟು ಹಣವೂ ಇತ್ತು. ಪತ್ನಿಯ ಇಷ್ಟದಂತೆ ಹೊಸ ಮನೆ ಮಾಡಿದ್ದೂ ಆಯಿತು. ಈಗೀಗ ಸೊಸೆಗೆ ತನ್ನ ಒಕ್ಕಣ್ಣ ಅತ್ತೆ ಗಂಡ ಹೆಂಡಿರ ನಡುವೆ ಇರುವುದು ಸರಿತೋರಲಿಲ್ಲ. ಮತ್ತೆ ತನ್ನ ಗಂಡನ ತಲೆಗೆ ಹುಳಬಿಟ್ಟಳು. ಒಂದು ದಿನ ಮಗ ನೆಪವೊಂದನ್ನ ಹೇಳಿ ತಾಯಿಯ ವಾಸ್ತವ್ಯವನ್ನ ಹಳೇ ಮನೆಗೆ ವರ್ಗಾಯಿಸಿಬಿಟ್ಟ.

daddys-mother-is-a-beautiful-world-1

ಈಗಂತು ಆ ತಾಯಿ ಸಂಪೂರ್ಣ ಕುಸಿದೇ ಹೋದಳು. ಮಗನ ಬೇಕುಬೇಡವನ್ನೆಲ್ಲಾ ಪೂರೈಸುವ ಬರದಲ್ಲಿ ನಯಾ ಪೈಸೆಯೂ ಕೂಡಿಟ್ಟಿರಲಿಲ್ಲ. ಮೊದಮೊದಲು ಪ್ರತಿವಾರವೂ ಬಂದು ಒಂದಷ್ಟು ಹಣ ನೀಡಿ ಹೋಗುತಿದ್ದವ ಈಗೀಗ ಬರವುದೂ ಅಪರೂಪವಾಗಿಬಿಟ್ಟಿತು. ಆ ತಾಯಿಗೆ ಒಂದು ಹೊತ್ತಿನ ಊಟಕ್ಕೂ ಮಗನ ಹಾದಿ ಕಾಯುವ ಸ್ಥಿತಿ ಬಂತು. ಒಂದು ದಿನ ನೇರವಾಗಿ ಮಗನ ಮನೆಗೆ ಬಂದ ತಾಯಿಗೆ ಸೊಸೆಯ ಚುಚ್ಚು ಮಾತು ಅಪಮಾನವೇ ಬಹುಮಾನವಾಗಿತ್ತು.

ಮನನೊಂದ ತಾಯಿ ಉಪವಾಸ ಸತ್ತರೂ ಚಿಂತೆಯಿಲ್ಲ ಮಗನ ಮನೆಗೆ ಮತ್ತೆಂದೂ ಕಾಲಿಡಲಾರೆ ಎಂದು ಮನಸ್ಸಿನಲ್ಲೇ ದೃಡ ಸಂಕಲ್ಪ ಮಾಡಿದಳು. ನೇರವಾಗಿ ಮನಗೆ ಬಂದವಳೇ ವಿಪರೀತ ಜ್ವರದಿಂದ ಹಾಸಿಗೆ ಹಿಡಿದು ಬಿಟ್ಟಳು. ಮಗನಿಗೆ ಸೂಜಿಮೊನೆಯಷ್ಟು ನೋವಾಗಬಾರದೆಂದು ತನ್ನ ಹೃದಯದೊಳಗೆ ಕಾಪಾಡಿದ ತಾಯಿ ದಿನ ಕಳೆದಂತೆ ಹಾಸಿಗೆ ಬಿಟ್ಟು ಏಳಲಾರದ ಸ್ಥಿತಿಗೆ ತಲುಪಿದಳು.

ಒಂದು ದಿನ ಆಫೀಸಿನಲ್ಲಿದ್ದ ಮಗನಿಗೆ ಕರೆಯೊಂದು ಬಂತು. “ನಿನ್ನ ತಾಯಿ ಇಂದು ಮುಂಜಾನೆ ತೀರಿ ಹೋದರು, ಚಿತೆಗೆ ಬೆಂಕಿ ಇಡುವುದಕ್ಕಾದರೂ ಬಾ” ಎಂದಷ್ಟೇ ಹೇಳಿ ಕರೆ ಕಟ್ಟ್ ಆಯಿತು. ಸರಿ ಇದೂ ಆಗಲಿ ಮುಂದೆಂದೂ ಆಮುದುಕಿಯ ಕಿರಿಕಿರಿ ಇಲ್ಲವಲ್ಲಾ ಎಂದು ಎದ್ದು ನೇರವಾಗಿ ತಾಯಿಯ ಮನೆಗೆ ಹೋದ.

ಹೋಗಿ ತಾಯಿಯ ಶವ ನೋಡುತ್ತಾನೆ ಇವಳೇನಾ ನನ್ನ ಹೆತ್ತ ತಾಯಿ ಎಂಬ ಸ್ಥಿತಿಗೆ ತಲುಪಿತ್ತು ಆ ತಾಯಿಯ ‌ದೇಹ. ಶವದ ಕಣ್ಣಂಚಲ್ಲಿ ಇನ್ನೂ ನೀರಿತ್ತು. ಸರಿ ಶವ ಸಂಸ್ಕಾರ ಮುಗಿಸಿ ಮನೆಗೆ ಹೊರಟು ನಿಂತ ಮಗನಿಗೆ ನೆರೆಮನೆಯಾತ ಒಂದು ಕಾಗದವನ್ನು ಕೈಗಿಟ್ಟು ಹೋದ.

ಕಾಗದ ತೆಗೆದು ನೋಡಿದ ಮಗನಿಗೆ ನೂರು ಸಿಡಿಲು ಒಂದೇ ಕ್ಷಣ ಬಡಿದಂತ ಅನುಭವವಾಯಿತು. ಆ ಕಾಗದದಲ್ಲಿ ಹೀಗೆ ಬರೆದಿತ್ತು.

“ಮಗನೇ ನಾನಿನ್ನು ಹೋಗುತ್ತೇನೆ ಆದರೆ ನನ್ನ ಒಂದು ಕಣ್ಣು ಏನಾಯಿತು ಎಂದು ಚಿಕ್ಕವನಿದ್ದಾಗ ನೀನು ಕೇಳುತ್ತಿದ್ದೆ. ಆದರೆ ಇನ್ನೂ ಚಿಕ್ಕ ಮಗುವಾಗಿದ್ದ ನಿನ್ನ ಮನಸ್ಸು ನೋಯಿಸಬಾರದೆಂದು ಏನೇನೋ ಸುಳ್ಳು ಹೇಳುತ್ತಿದ್ದೆ. ಇಂದು ನೀನೂ ಬೆಳೆದು ದೊಡ್ಡವನಾಗಿದ್ದೀಯ. ಸತ್ಯ ನಿನಗೂ ತಿಳಿಯಲಿ. ನೀನು ಚಿಕ್ಕವನಿರುವಾಗ ಆಟವಾಡುವಾಗ ಕೋಲೊಂದು ತಾಗಿ ನಿನ್ನ ಕಣ್ಣು ಹೋಗಿತ್ತು.

ನನಗೆ ಇನ್ನು ಗಬೇಕಿರುವುದಾದರೂ ಏನು ತನ್ನ ಮಗನ ಜೀವನ ಹಾಳಾಗಬಾರದೆಂದು ನನ್ನ ಒಂದು ಕಣ್ಣನ್ನ ನಿನಗೆ ನೀಡಿದ್ದೆ. ಇಂದು ನಿನಗೆ ಈ ಒಕ್ಕಣ್ಣ ತಾಯಿ ಬೇಡವಾದೆ. ಪರವಾಗಿಲ್ಲ ಮಗು. ಆದರೆ ನನ್ನದೊಂದು ಪುಟ್ಟ ಕೋರಿಕೆಯಿದೆ. ನನ್ನ ಆ ಕಣ್ಣಿನಲ್ಲಿ ಎಂದಿಗೂ ನೀರು ಬರಬಾರದು“. ಎಂದು ಬರೆದಿತ್ತು. ಆಗ ಮಗನಿಗೆ ಅರಿಯದಂತೆ ಕಣ್ಣಲ್ಲಿ ಧಾರಾಕಾರವಾಗಿ ನೀರಿಳಿಯಿತು. ಧಗಧಗನೆ ಉರಿಯುವ ತಾಯಿಯ‌ ಚಿತೆಯನ್ನೇ ನೋಡುತ್ತಾ ನಿಂತ ಮಗನಿಗೆ ತಾಯಿಯ‌ ಕಾಲಕೆಳಗೆ ಬಿದ್ದು ಅಳಬೇಕೆನಿಸಿತು. ಆದರೆ ಕಾಲ ಮೀರಿತ್ತು. ಆ ಮಹಾದಾನಿ ತಾಯಿ ಈ ಭೂಮಿಯಿಂದ ಬಹುದೂರ ಸಾಗಿ ಗಗನದಲ್ಲಿ ಮಿನುಗುವ ತಾರೆಯಂತೆ ಹೊಳೆಯುತಿದ್ದಾಳೆ.

(ಆತ್ಮೀಯ ಮಿತ್ರರೇ ತಾಯಿ ಎಂಬ ಎರಡು ಪದದಲ್ಲಿ ಅಸಾಧ್ಯವಾದ ತ್ಯಾಗವಿದೆ, ನೋವಿದೆ. ಮಕ್ಕಳ ಏಳಿಗಾಗಿ ಒಬ್ಬ ತಾಯಿ ಏನೆಲ್ಲಾ ತ್ಯಾಗ ಮಾಡಬಹುದೆಂದು ಒಂದು ಚಿಕ್ಕ ಕಥೆಯ ಮೂಲಕ ವಿವರಿಸುವುದು ಅಸಾಧ್ಯ. ತಾಯಿಯೆಂದರೆ ಅದು ದೇವರ ಪ್ರತಿರೂಪ ಅಲ್ಲವೇ..)