ಶಿವಗಂಗೆ, ಎಡೆಯೂರಿಗೆ ಹೋಗುವವರು ಶಿಲ್ಪಕಲೆಯ ವೈಭೋಗದ ತುರುವೇಕೆರೆ ಶ್ರೀ ಚೆನ್ನಕೇಶವ ದೇವಾಲಯವನ್ನು ನೋಡಲು ಮರೆಯದಿರಿ….

0
1238

ದೇಶದಲ್ಲೇ ಅತ್ಯಧಿಕ ತೆಂಗು ಬೆಳೆವ ಪ್ರದೇಶವೆಂಬ ಖ್ಯಾತಿವೆತ್ತ ತಿಪಟೂರಿನಿಂದ 35 ಕಿಮಿ ದೂರದಲ್ಲಿರುವ ತುರುವೇಕೆರೆಯ ಹೊಯ್ಸಳ ಶೈಲಿಯ ಅಲಂಕೃತ ಶ್ರೀ ಚೆನ್ನಕೇಶವ ದೇವಾಲಯವು ಪ್ರವಾಸಿಗರ ಕಣ್ಮನವನ್ನು ತನ್ನತ್ತ ಸೆಳೆಯುತ್ತದೆ.

ಹೊಯ್ಸಳ ಶೈಲಿಯಲ್ಲಿ ಅತಿ ಸೂಕ್ಷ್ಮ ಕುಶಲ ಕಲೆಗಾರಿಕೆಯ ಕೆತ್ತನೆಯಿಂದ ಕೂಡಿದ ಮನಸೂರೆಗೊಳ್ಳುವ ಶ್ರೀ ಚೆನ್ನಕೇಶವ ಸ್ವಾಮಿಯು ಕಪ್ಪು ಶಿಲೆಯ ವಿಗ್ರಹವನ್ನು ವೀಕ್ಷಿಸುವುದೇ ಒಂದು ಸೊಗಸು. ತುರುವೇಕೆರೆಯಿಂದ ತಿಪಟೂರಿಗೆ ಹೋಗುವ ರಸ್ತೆಯಲ್ಲಿ ಬಲಕ್ಕೆ ಶ್ರೀ ಕಾಳಿಕಾಂಬಾ ದೇವಾಲಯಕ್ಕೆ ದಾರಿ ಎಂಬ ನಾಮಫಲಕವು ಕಾಣಿಸುತ್ತದೆ.ಈ ದಾರಿಯಲ್ಲಿ ಒಂದರ್ಧ ಕಿಮಿ ಸಾಗಿದರೆ ಎಡಕ್ಕೆ ೧೪ ಶತಮಾನದ ಹಳೆಯ ದೇಗುಲವನ್ನು ಕಾಣಬಹುದು.

ಗಂಗರ ಕಾಲದಲ್ಲಿ ಈ ದೇಗುಲದ ನಿರ್ಮಾಣದ ಕಾರ್ಯವು ಪ್ರಾರಂಭಗೊಂಡರೂ ವಿಜಯನಗರದ ಅರಸರ ಕಾಲದಲ್ಲಿ ಸರ್ವತೋಮುಖ ಬೆಳವಣಿಗೆಯನ್ನು ಕಂಡಿತು ಎನ್ನಲಾಗಿದೆ. ಇಡೀ ದೇಗುಲವು ಬಳಪದ ಕಲ್ಲಿನಿಂದ ಕೆತ್ತಲ್ಪಟ್ಟಿದ್ದು ಕೆತ್ತನೆಯಲ್ಲಿ ಹೊಯ್ಸಳರ ಶೈಲಿಯ ಸೊಗಡನ್ನು ಕಾಣಬಹುದು. ದೇಗುಲದ ಇಕ್ಕೆಲಗಳಲ್ಲಿ ಸುಂದರವಾಗಿ ಕೆತ್ತಲ್ಪಟ್ಟ ಪುಟ್ಟ ಪುಟ್ಟ ಗುಡಿ ಗೋಪುರಗಳ ಶಿಲ್ಪಗಳನ್ನು ಕಾಣಬಹುದು. ಈ ದೇವಾಲಯವು ಆರು ಬೃಹತ್ ಗಾತ್ರದ ಸುಂದರ ಕೆತ್ತನೆಯಿಂದ ಒಡಗೂಡಿದ ಕಂಬಗಳಿಂದ ಅಲಂಕೃತಗೊಂಡಿದೆ. ಗರ್ಭಗುಡಿಯ ಮುಂಬಾಗದ ನಾಲ್ಕು ಕಂಬಗಳು ಇಂದಿಗೂ ಸಹಾ ತಮ್ಮ ಶಿಲ್ಪಕಲಾ ಸೌಂದರ್ಯದಿಂದ ಇಡೀ ದೇಗುಲಕ್ಕೆ ಕಳೆ ಕಟ್ಟಿ ನಿಂತಿವೆ. ಇನ್ನು ಗರ್ಭಗುಡಿಯಲ್ಲಿ ಆಳೆತ್ತರದ ಕಪ್ಪುಶಿಲೆಯಿಂದ ಅತ್ಯಂತ ಸುಂದರವಾಗಿ ಕೆತ್ತಲ್ಪಟ್ಟ ಶ್ರೀ ಚೆನ್ನಕೇಶವ ವಿಗ್ರಹವನ್ನು ಎಷ್ಟು ಹೊತ್ತು ನೋಡಿದರು ಸಾಲದು.

ಈ ದೇಗುಲವು ಡಂಕಣಾಚಾರ್ಯರ ಮಗ ಬಕ್ಕಣ್ಣಾಚಾರ್ಯರಿಂದ ಕೆತ್ತಲ್ಪಟ್ಟಿತು ಎಂದು ಇಲ್ಲಿನ ಇತಿಹಾಸವು ಸೂಚಿಸುತ್ತದೆ. ಇಲ್ಲಿಂದ ಅನತಿ ದೂರದಲ್ಲಿ ಮೂಲಶಂಕರೇಶ್ವರ ಎಂಬ ಮತ್ತೊಂದು ಪುರಾತನ ದೇಗುಲವನ್ನು ಸಹ ಕಾಣಬಹುದು. ಇಲ್ಲಿಂದ ಕೇವಲ ೨೦ ಕಿಮಿ ದೂರದಲ್ಲಿ ಪ್ರಸಿದ್ಧ ಕ್ಷೇತ್ರ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ದರ್ಶನವನ್ನೂ ಸಹ ಮಾಡಬಹುದು.

ಎಡೆಯೂರು, ಶಿವಗಂಗೆಗೆ ಭೇಟಿ ನೀಡುವವರು ಒಮ್ಮೆ ಇಲ್ಲಿಗೂ ಭೇಟಿನೀಡಿ ಶಿಲ್ಪಕಲೆಯನ್ನು ಆಸ್ವಾಧಿಸಿ..