ಏನೂ ಅರಿಯದ ಅಜ್ಜಿಗೆ ಮೋಸದಿಂದ ಕೋಟ್ಯಂತರ ಬೆಲೆ ಬಾಳೋ ಭೂಮಿ ಬರೆಸಿಕೊಂಡು ಪರಾರಿಯಾದ ಮೊಮ್ಮಗಳು!!

0
214

ಉಡುಪಿ ಜಿಲ್ಲೆಯ ಸಾಮತೂರು ಗ್ರಾಮದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಸೆಲೆಸ್ಟಿನ್ ಎಂಬ ವೃದ್ಧೆ ಕಷ್ಟಪಟ್ಟು ಮಾಡಿದ್ದ ಆಸ್ತಿಯನ್ನ ಮೊಮ್ಮಗಳು ತನ್ನ ಹೆಸರಿಗೆ ಮಾಡಿಸಿಕೊಂಡು ಮೋಸ ಮಾಡಿದ್ದಾಳೆ.

ಇವರು 1967ರಲ್ಲಿ ಎರಡು ಎಕರೆ ಜಮೀನನ್ನು ಖರೀದಿಸಿದ್ದರಂತೆ. ಗಂಡ ಗ್ರೆಗರಿ ಡಿಸೋಜರೊಂದಿಗೆ ಸೇರಿ ಆ ಜಮೀನಿನಲ್ಲಿ ಮನೆಯನ್ನೂ ಕಟ್ಟಿಸಿದ್ದಾರೆ. ನಂತರ ಉಳಿದ ಜಮೀನಿನಲ್ಲಿ ಬಾವಿ ತೋಡಿ ಕೃಷಿ ಮಾಡೋದಕ್ಕೆ ಆರಂಭಿಸಿದ್ದಾರೆ. ಅದರಿಂದ ಬರುವ ಆದಾಯದಿಂದ ನಾಲ್ಕೂ ಮಕ್ಕಳನ್ನು ಸಾಕಿ ಬೆಳೆಸಿದ್ದಾರೆ.

ಎಲ್ಲರಿಗೂ ಮದುವೆ ಮಾಡಿ ಸಂಸಾರ ಕಟ್ಟಿ ಕೊಟ್ಟಿದ್ದಾರೆ. ಕೆಲ ವರ್ಷದ ಹಿಂದೆ ಗಂಡ ಗ್ರೆಗರಿ ಸತ್ತಾಗ ಮುಂಬೈಯಲ್ಲಿ ದುಡಿಯುತ್ತಿದ್ದ ಹಿರಿಯ ಮಗ ರೋನಾಲ್ಡ್ ರ ಸಂಸಾರವನ್ನು ಮನೆಗೆ ಕರೆಸಿಕೊಂಡ, ಸೆಲೆಸ್ಟಿನ್ ಆಸ್ತಿಯನ್ನು ಭಾಗ ಮಾಡಿದ್ದಾರೆ. ತನ್ನ ಜೀವಿತಾವಧಿಯ ನಂತರ ಮಕ್ಕಳ ನಡುವೆ ಗಲಾಟೆಯಾಗಬಾರದು ಎಂಬ ಕಾರಣಕ್ಕೆ ತನ್ನ ಆಸ್ತಿಯಲ್ಲಿ ನಾಲ್ಕು ಮಕ್ಕಳಿಗೂ ಸಮಪಾಲು ಮಾಡಿ ವಿಲ್ ಬರೆಸಿದ್ದರು. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾವಣಿ ಕೂಡ ಮಾಡಿಸಿದ್ದಾರೆ.

ಆದ್ರೆ 2019ರ ಜನವರಿ ತಿಂಗಳಲ್ಲಿ ಸಾಂತೂರಿನ ಮನೆಗೆ ಬಂದ ರೋಶನಿ, ತಂದೆ ರೋನಾಲ್ಡ ಹಾಗೂ ಅಜ್ಜಿಯನ್ನೂ ಮೂಲ್ಕಿಯ ಯಾವುದೋ ಕಚೇರಿಗೆ ಕರೆದೊಯ್ದು ಕೆಲವು ಕಾಗದ ಪತ್ರಗಳಿಗೆ ಇಬ್ಬರ ಹೆಬ್ಬೆಟ್ಟು ಗುರುತು ಹಾಗೂ ಸಹಿ ಪಡೆದಿದ್ದಳಂತೆ. ಯಾಕೆ ಅಂತ ಕೇಳಿದ್ರೆ ರೈತರಿಗೆ ಸಾಲ ನೀಡುವ ಯೋಜನೆಯೊಂದು ಬಂದಿದೆ. ಅದಕ್ಕಾಗಿ ನೋಂದಣಿ ಮಾಡಲು ಬಂದಿದ್ದೇವೆ ಎಂದಿದ್ದಳಂತೆ. ಆಗಲೇ ಎಲ್ಲಾ ಆಸ್ತಿಯನ್ನು ರೋಶನಿ ತನ್ನ ಹೆಸರಿಗೆ ಬರೆದುಕೊಂಡಿದ್ದಾಳೆ.

ಇಪ್ಪತ್ತು ದಿನಗಳ ಹಿಂದೆ ಪಂಚಾಯತ್ ಅಧಿಕಾರಿಗಳು ಸರಕಾರಿ ಯೋಜನೆಯೊಂದಕ್ಕಾಗಿ ಕೃಷಿ ಸಮೀಕ್ಷೆಗೆಂದು ಬಂದಿದ್ದಾರೆ. ಮನೆ ಹಾಗೂ ಜಮೀನು ಹಿರಿಯ ಮಗ ರೋನಾಲ್ಡರ ಮಗಳು ರೋಶನಿಯ ಹೆಸರಿನಲ್ಲಿದೆ ಎಂಬುದು ತಿಳಿದುಬಂದಿದೆ. ಪ್ರೀತಿಯಿಂದ ಸಾಕಿದ ಮೊಮ್ಮಗಳೇ ಈ ರೀತಿ ಮಾಡಿದಳಲ್ಲ ಎಂಬುದನ್ನು ಅಜ್ಜಿಗೆ ಅರಗಿಸಿಕೊಳ್ಳಲು ಆಗಿಲ್ಲ. ರೋಶನಿಯ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ. ನನಗೆ ನ್ಯಾಯ ಕೊಡಿಸಿ ಅಂತ ಮಾನವ ಹಕ್ಕುಗಳ ಸಂರಕ್ಷಣಾ ಪ್ರತಿಷ್ಠಾನಕ್ಕೆ ಅಜ್ಜಿ ಮೊರೆ ಇಟ್ಟಿದ್ದಾರೆ.