ಉಡುಪಿ ಪರ್ಯಾಯದಲ್ಲಿ ಪೇಜಾವರ ಮಠದಿಂದ ಪಲಿಮಾರು ಮಠಕ್ಕೆ ಹಸ್ತಾಂತರಿಸಲ್ಪಟ್ಟ ಉಡುಪಿ ಶ್ರೀ ಕೃಷ್ಣ ಮಠದ ಸಾರ್ವಭೌಮತ್ವ..

0
1173

ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶಶ್ರೀಪಾದರ ಸರ್ವಜ್ಞ ಪೀಠಾರೋಹಣ.
ಉಡುಪಿಯಲ್ಲೀಗ ಸಂಭ್ರಮವೋ ಸಂಭ್ರಮ…ಎಲ್ಲಿ ನೋಡಿದರಲ್ಲಿ ದೀಪಗಳ ಅಲಂಕಾರ, ಬಣ್ಣ ಬಣ್ಣದ ಚಿತ್ತಾರ, ಊರಿಗೆ ಊರೇ ನವವಧುವಿನಂತೆ ಸಿಂಗರಿಸಿಕೊಂಡಂತೆ ಕಾಣುವ ಪರ್ಯಾಯದ ವೈಭವ. ದ್ವೈತ ಮಠದ ಸ್ಥಾಪನೆಕಾರರಾದ ಶ್ರೀ ಮದ್ವಾಚಾರ್ಯರು ಸ್ಥಾಪಿಸಿದ ಅಷ್ಟ ಮಠಾಧೀಶರು ಒಮ್ಮೆಲೇ ಕೂಡಿ ಶ್ರೀಕೃಷ್ಣನ್ನು ಆರಾಧಿಸುವ ಪುಣ್ಯಕಾಲ. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಪರ್ಯಾಯದಲ್ಲಿ ಶ್ರೀಕೃಷ್ಣಮಠದ ಗದ್ದುಗೆ ಒಂದು ಮಠದಿಂದ ಇನ್ನೊಂದು ಮಠಕ್ಕೆ ಹಸ್ತಾಂತರವಾಗುತ್ತದೆ. ಜನವರಿ ೧೮ ರಂದು ನಡೆಯುವ ಪರ್ಯಾಯದಲ್ಲಿ ಅನೇಕ ಪೂಜಾ ಕೈಂಕರ್ಯಗಳಿದ್ದು ನೋಡುಗರನ್ನು ಮಂತ್ರ ಮುಗ್ದಗೊಳಿಸುತ್ತವೆ.

ಜನವರಿ ೧೮ ರ ನಸುಕಿನಲ್ಲಿಯೇ ಪರ್ಯಾಯದ ಸೇವೆಗಳು ಆರಂಭವಾಗುವುದಾದರೂ ಇದರ ತಯಾರಿ ಸುಮಾರು ಒಂದು ವರ್ಷದಿಂದಲೇ ಪ್ರಾರಂಭವಾಗುತ್ತದೆ. ಮಠದ ಭಾವಿ ಉತ್ತರಾಧಿಕಾರಿಗಳು ದಂಡತೀರ್ಥ ಎಂಬ ಸ್ಥಳದಲ್ಲಿರುವ ಕಲ್ಯಾಣಿಯಲ್ಲಿ ಮಿಂದು ಬೆಳಗ್ಗಿನ ಜಾವ ಮೂರು ಗಂಟೆಗೆ ಉಡುಪಿ ನಗರವನ್ನು ಪ್ರವೇಶಿಸುತ್ತಾರೆ. ಉಡುಪಿಯ ಜೋಡುಕಟ್ಟೆ ಎಂಬ ಸ್ಥಳದಿಂದ ಅಷ್ಟಮಠದ ಸ್ವಾಮೀಜಿಗಳನ್ನು ಹೊತ್ತ ಪಲ್ಲಕ್ಕಿಯ ಜೊತೆ ಪೂರ್ಣ ಕುಂಭ ಮೆರವಣಿಗೆ ರಥಬೀದಿಯನ್ನು ದಾಟಿ ದೇಗುಲವನ್ನು ಪ್ರವೇಶಿಸುತ್ತದೆ. ಅಲ್ಲಿಂದ ಹಾಲಿ ಉತ್ತರಾಧಿಕಾರಿಗಳು ಭಾವಿ ಉತ್ತರಾಧಿಕಾರಿಗಳನ್ನು ಬರ ಮಾಡಿಕೊಂಡು ಶ್ರೀಕೃಷ್ಣಮಠದ ಪ್ರಭುತ್ವಗಳನ್ನು ಔಪಚಾರಿಕವಾಗಿ ಹಸ್ತಾಂತರಿಸಲಾಗುತ್ತದೆ.ಇವೆಲ್ಲ ಕಾರ್ಯಕ್ರಮಗಳು ಮಠದ ಸರ್ವಜ್ಞ ಪೀಠದಲ್ಲಿ ಆಯೋಜಿಸಲಾಗಿ ಅಲ್ಲಿ ಭಾವಿ ಉತ್ತರಾಧಿಕಾರಿಗಳಿಗೆ ಅಕ್ಷಯಪಾತ್ರೆ ಒಳಗೊಂಡಂತೆ ಮಠದ ಸರ್ವ ಪ್ರಭುತ್ವದ ಕೀಲಿ ಕೈಯನ್ನು ನೀಡಲಾಗುತ್ತದೆ. ನಂತರ ರಾಜಾಂಗಣದಲ್ಲಿ ದರ್ಬಾರನ್ನು ನಡೆಸಲಾಗಿ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ.

ಪರ್ಯಾಯಕ್ಕೆ ಒಂದು ವರ್ಷ ಮುಂಚಿತವಾಗಿ ಬಾವಿ ಉತ್ತರಾಧಿಕಾರಿಯಿಂದ ಬಾಳೆ ಮಹೂರ್ತ, ಅಕ್ಕಿ ಮಹೂರ್ತ, ಕಟ್ಟಿಗೆ ಮಹೂರ್ತ ಮತ್ತು ಬಟ್ಟಾ ಮಹೂರ್ತಗಳನ್ನು ಶುಭದಿನದಂದೂ ನೆರವೇರಿಸಲಾಗುತ್ತದೆ. ಪರ್ಯಾಯಕ್ಕೆ ಮತ್ತು ಬರುವ ಭಕ್ತಾದಿಗಳ ಉಪಯೋಗಕ್ಕಾಗಿಯೇ ಬಾಳೆಗಿಡಗಲ್ನ್ನು ನೆಡುವ, ಅಕ್ಕಿಯನ್ನು ಶೇಖರಿಸುವ, ಕಟ್ಟಿಗೆಯನ್ನು ಶೇಖರಿಸುವ, ಭತ್ತವನ್ನು ಸಂಗ್ರಹಿಸುವ ಕಾರ್ಯಗಳು ನಡೆಯುತ್ತವೆ. ಈಗ ಕೃಷ್ಣಮಠದ ಅಧೀನದಲ್ಲಿ ಹೊಲ, ಗದ್ದೆ ಜಮ್ಮೆನುಗಳು ಇಲ್ಲವಾದುದರಿಂದ ಕೇವಲ ಕರ್ತವ್ಯ ರೂಪದಲ್ಲಿ ಈ ಶಾಸ್ತ್ರಗಳನ್ನು ಮಾಡಲಾಗುತ್ತಿದೆ.

ಪರ್ಯಾಯದ ಮಠಗಳ ಆಯ್ಕೆಯು ಪಾಲಿಮಾರು ಮಠದಿಂದ ಪ್ರಾರಂಭವಾಗಿ ಅದಮಾರು, ಕೃಷ್ಣಾಪುರ,ಪುತ್ತಿಗೆ, ಶಿರೂರು,ಸೊಂದೇ, ಕಣಿಯೂರು,ಮತ್ತು ಪೇಜಾವರ ಮಠದವರಿಗೆ ಸಾಲಾಗಿ ಕೃಷ್ಣಮಠದ ಪ್ರಭುತ್ವವು ಸಿಗುತ್ತದೆ.

ಪ್ರಸ್ತುತ ಪೇಜಾವರ ಮಠದ ಯತಿಗಳಾದ ಶ್ರೀಶ್ರೀ ವಿಶ್ವೇಶ್ವರ ತೀರ್ಥರು ಪಲಿಮಾರು ಮಠದ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶಶ್ರೀಪಾದರಿಗೆ ಶ್ರೀ ಕೃಷ್ಣಮಠದ ಪ್ರಭುತ್ವವನ್ನು ಹಸ್ತಾಂತರಿಸಲಿದ್ದಾರೆ.