ಶ್ರೀಪಾದ ಶ್ರೀವಲ್ಲಭ ಮಹಾಸಂಸ್ಥಾನದ ಪರ್ತಗಾಳಿ ಪರಂಪರೆಯ ಮಹಾನ್ ಸಾಧಕ!!

0
630

ಕೋಟಿಗಟ್ಟಲೆ ಮಿಂಚುಹುಳುಗಳು ಬೆಳಕನ್ನು ಹೊರ ಸೂಸುತ್ತಿದ್ದರೂ ಕತ್ತಲೆಯನ್ನು ಹೊಡೆದೋಡಿಸಲಾರವು. ಒಮ್ಮೆಗೆ ನೂರಾರು ದೀಪಗಳನ್ನು ಹಚ್ಚಿಟ್ಟರೂ ಎಣ್ಣೆ ತೀರಿಹೋಗಿಯೋ, ಗಾಳಿಯಿಂದಲೋ ದೀಪ ಆರಿ ಹೋಗುತ್ತಿದ್ದಂತೆ ಕತ್ತಲೆ ತನ್ನ ಸಾಮ್ರಾಜ್ಯ ಸ್ಥಾಪಿಸುತ್ತದೆ. ಅದೇ ಸೂರ್ಯ ಭಗವಾನ್ ಎದ್ದು ಒಮ್ಮೆ ಕಣ್ತೆರೆಯುತ್ತಿದ್ದಂತೆ ಇಡೀ ಭೂಮಿ ಮೇಲಿನ ಕಗ್ಗತ್ತಲೆ ಹೊದಿಕೆ ಎದ್ದೋಡುತ್ತದೆ. ಇದರೊಂದಿಗೆ ಎಲ್ಲೆಡೆ ಬೆಳಕಿನ ಸಾಮ್ರಾಜ್ಯ ವಿಜೃಂಭಿಸುತ್ತದೆ. ಅದೇ ರೀತಿ ಜ್ಞಾನ ಪಾಂಡಿತ್ಯ, ತಪೋಶಕ್ತಿ, ಕಾರ್ಯತತ್ಪರತೆ ಹೊಂದಿರುವ ಶ್ರೇಷ್ಠ ಗುರುವಿನ ಕೃಪಾ ದೃಷ್ಟಿ ಶಿಷ್ಯನ ಮೇಲೆ ಬೀಳುತ್ತಿದ್ದಂತೆ ಅವನ ಜನ್ಮಜನ್ಮಾಂತರದ ಪಾಪಗಳು ನಾಶವಾಗಿ, ಜ್ಞಾನವೆಂಬ ಮಹಾನಿಧಿ ಆತನ ವಶವಾಗುತ್ತದೆ. ಈ ದೃಷ್ಟಾಂತಕ್ಕೆ ಅನ್ವರ್ಥಕವಾಗಿರುವವರೇ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು.

ಸೂರ್ಯನಂತಹ ತೇಜಸ್ಸು, ಅಪರಿಮಿತ ಪಾಂಡಿತ್ಯ, ಸಂಘಟನಾ ಚಾತುರ್ಯ, ಪರಿವ್ರಾಜಕತ್ವ, ಔದಾರ್ಯ, ಸರಳತೆ, ಸಮಯ ಪ್ರಜ್ಞೆ ಸರ್ವವೂ ಮಿಳಿತವಾಗಿರುವ ಓರ್ವ ಗುರುವರ್ಯರಾಗಿದ್ದಾರೆ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು.

ವೈಭವದಲ್ಲಿ ಅಧಿಕವಾಗಿ ದಶದಿಕ್ಕುಗಳಿಗೂ ಶ್ರೀ ಸಂಸ್ಥಾನದ ಕೀರ್ತಿ ಹರಡಲು ಕಾರಣರಾದವರು ಇವರು, ಈ ಧರ್ಮ ಪೀಠದ 23ನೇ ಪೀಠಾಧಿಪತಿಗಳು. ಶ್ರೀ ಸಂಸ್ಥಾನದ ಬಹುಶ್ರುತ ಯತಿವರ್ಯರಾದ ವೃಂದಾವನಸ್ಥ ಶ್ರೀಮದ್ ದ್ವಾರಕಾನಾಥ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಇವರನ್ನು ಸ್ವಸಮಾಜದ ಸರ್ವ ಶಿಷ್ಯ ವರ್ಗದವರ ಪ್ರಬಲ ಇಚ್ಛೆ ಪ್ರಕಾರ ಶ್ರೀಮಠದ ಉತ್ತರಾಧಿಕಾರಿಯನ್ನಾಗಿ ಆರಿಸಿ ಶ್ರೀಶಕೆ 1888ರ ಪರಾಭವನಾಮ ಸಂವತ್ಸರ ಮಾಘ ಹುಣ್ಣಿಮೆ ಮತ್ತು ಬಹುಳ ಪ್ರತಿಪದಾ ದಿವಸ ಸನ್ಯಾಸ ಆಶ್ರಮ ವಿಧಿಯನ್ನು ವಿಧಿಯುಕ್ತ ಪೂರೈಸಿ ಸಮಾರಂಭದ ಎರಡನೇ ದಿನ ರವಿವಾರ 26-2-1967ರಂದು ಮಧ್ಯಾಹ್ನ ಅಭಿಜಿನ್ ಶುಭ ಮುಹೂರ್ತದಲ್ಲಿ ಪ್ರಣವ ಮಂತ್ರೋಪದೇಶ ಪೂರ್ವಕ ಅವರನ್ನು “ಶ್ರೀ ವಿದ್ಯಾಧಿರಾಜ” ಎಂದು ನಾಮಾಭಿದಾನ ಮಾಡಿ ತಮ್ಮ ಶಿಷ್ಯರನ್ನಾಗಿ ಸ್ವೀಕರಿಸಿದರು. ಶಿಷ್ಯ ಸ್ವೀಕಾರದ ಬಳಿಕ ಅಲ್ಪ ಸಮಯದಲ್ಲಿಯೇ ಗುರುಗಳ ನಿರ್ಯಾಣದ ನಂತರ ಗುರುವಾರ 5-4-1973 ರಂದು ಶ್ರೀಮಠದ 23ನೆಯ ಗುರುವರ್ಯರಾಗಿ ಶ್ರೀ ಪರ್ತಗಾಳಿ ಮಠದಲ್ಲಿ ಗುರು ಪೀಠಾರೋಹಣ ಶುಭ ಮುಹೂರ್ತದಲ್ಲಿ ನೆರವೇರಿತು.

ಐದುನೂರು (500) ವರ್ಷಗಳ ಹಿಂದೆ ಇದೇ ದಿನ (ಚೈತ್ರಶುದ್ಧ ದ್ವಿತೀಯಾ) ಶ್ರೀಮಠದ ಆದ್ಯ ಗುರುಗಳಾದ ಶ್ರೀಮದ್ ನಾರಾಯಣ ತೀರ್ಥ ಸ್ವಾಮಿ ಮಹಾರಾಜರ ಸನ್ಯಾಸ ದೀಕ್ಷಾ, ಹಾಗೆಯೇ ಶ್ರೀಗೋಕರ್ಣ ಮಠದ ಸಂಸ್ಥಾಪನಾ ದಿನ ಮತ್ತು ಈಗ ವಿದ್ಯಮಾನ ಗುರುಗಳ ಗುರುಪೀಠಾರೋಹಣವು ಅದೇ ತಿಥಿಯ ದಿವಸವೂ ಆಗಿರುವುದರಿಂದ ಈ ತಿಥಿಗೆ ತ್ರಿವಿಧ ಮಹತ್ವವಿರುವುದು. ಇದೇ ತ್ರಿವಿಧ ಮಹತ್ವದ ಶುಭದಿನವೇ ಸಮಾಜಕ್ಕೆ ಅಪಾರ ಸೇವೆ ಸಲ್ಲಿಸಿ, ಸಮಾಜದ ಖ್ಯಾತಿಯನ್ನು ಉಜ್ವಲಗೊಳಿಸಿದ ಸದ್ಗøಹಸ್ಥರಿಗೆ ಶ್ರೀಗಳವರಿಂದ “ ಶ್ರೀವಿದ್ಯಾಧಿರಾಜ” ಪುರಸ್ಕಾರ ನೀಡಲಾಗುತ್ತದೆ. ಅದೇ ರೀತಿ ಸಮಾಜದ ಮತ್ತು ಮಠದ ಉನ್ನತಿಗೆ ಶ್ರಮಿಸಿದ ಸಮಾಜ ಬಾಂಧವರಿಗೆ `ಜೀವೋತ್ತಮ’ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಗುತ್ತದೆ. ಇದರಿಂದ ಸಮಾಜದ ಪ್ರತಿಯೊಬ್ಬರಿಗೂ ಪ್ರೇರಣೆ ದೊರಕಿ, ಅವರಿಂದ ಇತರರಿಗೆ ಉಪಕಾರ, ಸಹಾಯ, ಸೇವೆ ದೊರಕಲಿ ಎನ್ನುವುದೇ ಪೂಜ್ಯ ಸ್ವಾಮಿಯವರ ಮಹಾ ಉದ್ದೇಶವಾಗಿದೆ.
ಶ್ರೀಗಳವರು ದಕ್ಷಿಣ ಕನ್ನಡ ಜಿಲ್ಲೆ ಗಂಗೊಳ್ಳಿ ನಿವಾಸಿಗಳಾದ ಸನಾತನ ವೈದಿಕ ಮನೆತನದ ವೇದಮೂರ್ತಿ ಸೇನಾಪುರ ಶ್ರೀಲಕ್ಷ್ಮೀನಾರಾಯಣ ಆಚಾರ್ಯ ಮತ್ತು ಶ್ರೀಮತಿ ಬಾೈಯವರ ಉದರದಿಂದ ಜನಿಸಿದ ಸುಪುತ್ರರು. ಸನಾತನ ಧರ್ಮದ ಆಗರವಾದ ಈ ಮನೆಯಲ್ಲಿಯ ಧಾರ್ಮಿಕ ಸಂಸ್ಕøತಿಯ ವಾತಾವರಣದಲ್ಲಿ ಬೆಳೆದ ಈ ಕುಮಾರರಿಗೆ ಧಾರ್ಮಿಕ ಸಂಸ್ಕøತಿಗಳೇ ಮೈಯುಂಡು ಹೋಗಿತ್ತು. ಒಂದೆಡೆ ಶೇಷ ಶಯನ ಪವಡಿಸಿರುವ ಸಮುದ್ರದ ತೆರೆಗಳ ಇಂಚರವಾದರೆ, ಮತ್ತೊಂದೆಡೆ ಶ್ರೀ ವೆಂಕಟರಮಣ ದೇವರನ್ನು ಸ್ಮøತಿಸುವ ವೇದಮಂತ್ರಗಳ ದುಂದುಭಿ. ಇಂತಹ ಪರಿಸರದಲ್ಲಿ ಆಧ್ಯಾತ್ಮಿಕ ಸೃಷ್ಟಿ, ದೃಷ್ಟಿ ತನ್ನಷ್ಟಕ್ಕೆ ಚಿಗುರೊಡೆಯದಿರದು. ಪೂರ್ವಾಶ್ರಮದ ಸೇನಾಪುರ “ರಾಘವೇಂದ್ರ ಆಚಾರ್ಯರೆಂಬ” ನಾಮಾಭಿದಾನದೊಂದಿಗೆ ಬೆಳೆಯುತ್ತಿದ್ದ ಈ ಪ್ರತಿಭಾವಂತರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಜನ್ಮಸ್ಥಳವಾದ ಗಂಗೊಳ್ಳಿಯಲ್ಲಿ; ಉನ್ನತ ವಿಶ್ವವಿದ್ಯಾಲಯದ ಪದವಿ ಶಿಕ್ಷಣ ಕುಂದಾಪುರದ ಭಂಡಾರಕಾರ್ಸ್ ಕಾಲೇಜಿನಲ್ಲಿ ಪಡೆದವರಾಗಿದ್ದಾರೆ.