ಬಾಕ್ಸಿಂಗ್ ಲೋಕದ ಧ್ರುವತಾರೆ ವಿಜೇಂದರ್ ಸಿಂಗ್..

0
595

ಕ್ರೀಡೆಯಲ್ಲಿ ಹೆಸರು ಮಾಡಬೇಕು ಎಂಬ ಉದ್ದೇಶವನ್ನು ಹೊಂದಿದ ಸಾವಿರಾರು ಯುವಕರು ಸ್ಟಾರ್‍ಗಿರಿಯ ಕನಸು ಕಾಣುತ್ತಾರೆ. ದೇಶದ ಪರ ಅಖಾಡಕ್ಕೆ ಇಳಿದು, ಗೌರವ ತರುವ ಆಶಯ ಸರ್ವೆ ಸಾಮಾನ್ಯ. ಈ ಗುರಿಯನ್ನೇ ಸಾಕಾರಗೊಳಿಸಿದ ಕ್ರೀಡಾಪಟುವಿನ ಕಥೆ ಇಲ್ಲಿದೆ. ಬಾಕ್ಸಿಂಗ್ ಲೋಕದಲ್ಲಿ ಸತತ ಪರಿಶ್ರಮ, ಶ್ರದ್ಧೆಯಿಂದ ಹಲವು ವಯೋಮಿತಿಗಳಲ್ಲಿ ಭಾರತದ ಪರ ಆಡಿದ ಬಾಕ್ಸರ್ ಒಲಿಂಪಿಕ್ಸ್ ಕಂಚಿನ ಪದಕ ಗೆಲ್ಲುವ ಮಟ್ಟಕ್ಕೆ ಬೆಳೆಯುತ್ತಾರೆ ಎಂದರೆ, ಕ್ರೀಡೆಯ ಮೇಲೆ ಅವರ ಪ್ರೀತಿ ಗೊತ್ತಾಗುತ್ತದೆ. ಇದಲ್ಲದೆ, ವೃತ್ತಿಪರ ಬಾಕ್ಸಿಂಗ್‍ನಲ್ಲೂ ಅಖಾಡ ಪ್ರವೇಶಿಸಬೇಕೆಂಬ ಮಹದಾಸೆಯನ್ನು ಹೊಂದಿ ಅಲ್ಲಿಯೂ ಸೈ ಎನಿಸಿಕೊಳ್ಳುವುದು ಸುಲಭದ ಮಾತಲ್ಲ.

ವೃತ್ತಿಪರ ಬಾಕ್ಸಿಂಗ್ ಲೋಕದಲ್ಲಿ ಭಾರತ ಪ್ರಜ್ವಲಿಸುತ್ತಿದೆ. ಸತತ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದ ವಿಜೇಂದರ್ ಸಿಂಗ್ ನೂತನ ಧೃವತಾರೆ ಎಂದೇ ಕಂಗೊಳಿಸುತ್ತಿದ್ದಾರೆ. ಸದ್ಯ ವಿಜೇಂದರ್ ಮುಟ್ಟಿದ್ದೆಲ್ಲಾ ಗೆಲುವೇ. ಎದುರಾಳಿಯ ನಡೆಯನ್ನು ಅರಿತು ತಾಂತ್ರಿಕ ಅಂಶದ ಮೇಲೆ ಹೆಚ್ಚು ಒತ್ತು ನೀಡುವ ವಿಜೇಂದರ್ ವೃತ್ತಿಪರ ಬಾಕ್ಸಿಂಗ್‍ನ ಸ್ಟಾರ್ ಆಟಗಾರರನ್ನು ಅಖಾಡದಲ್ಲಿ ಕೆಡವಿದ್ದಾರೆ. ಬಾಕ್ಸಿಂಗ್ ಗ್ಲೌಸ್ ತೊಟ್ಟು ಮೈದಾನವನ್ನು ಪ್ರವೇಶಿಸಿದರೆ ಎದುರಾಳಿ ವಿರುದ್ಧ ಸಿಂಹದಂತೆ ಘರ್ಜಿಸುವ ವಿಜೇಂದರ್ ಜಯದ ಪತಾಕೆ ಹಾರಿಸುವುದರಲ್ಲಿ ನಿಸ್ಸಿಮರು.

ವಿಜೇಂದರ್ ಸಿಂಗ್ ತಮ್ಮ ಹತ್ತನೇ ವಯಸ್ಸಿನಲ್ಲಿ ಮೊದಲು ಆಯ್ಕೆ ಮಾಡಿಕೊಂಡ ಕ್ರೀಡೆ ಜಿಮ್ನಾಸ್ಟಿಕ್. ಆದರೆ ಜಿಮ್ನಾಸ್ಟಿಕ್‍ಗೆ ಅವಶ್ಯಕ ವಿದ್ದ ಕೆಲವು ಕಲೆಗಳನ್ನು ವಿಜೇಂದರ್ ಕಲಿಯಲಿಲ್ಲ. ಅವರು ಆಗಲೇ ಕ್ಷೇತ್ರವನ್ನು ಬದಲಿಸಿ ಬಾಕ್ಸಿಂಗ್ ಸೇರಿದರು. ಇವರ ಅಣ್ಣ ಮನೋಜ್ ಸಹ ಬಾಕ್ಸರ್. ಮನೋಜ್ ತಮ್ಮ ಬಾಕ್ಸಿಂಗ್ ಕ್ರೀಡೆಯ ಆಧಾರದ ಮೇಲೆಯೆ ಸೇನೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಅಣ್ಣನ ಮಾರ್ಗದಲ್ಲಿ ನಡೆದ ವಿಜೇಂದರ್ ಭಾರತ ಕಂಡ ಸ್ಟಾರ್ ಬಾಕ್ಸರ್‍ಗಳಲ್ಲಿ ಒಬ್ಬರು.

ವಿಜೇಂದರ್ ವಿಕೆಂಡ್‍ಗಳಲ್ಲಿ ತಮ್ಮ ಮನೆಯ ಅಡಿಗೆ ಮನೆ ಪ್ರವೇಶಿಸಿದರೆ ಮುಗಿಯಿತು. ಸಸ್ಯಹಾರಿ ಹಾಗೂ ಮಾಂಸಾಹಾರಿ ಖಾದ್ಯಗಳನ್ನು ತಯಾರಿಸಿ ಮನೆಯವರಿಗೆ ಉಣಬಡಿಸುತ್ತಾರೆ. ವಿಜೇಂದರ್‍ಗೆ ನಟನೆಯ ಹುಚ್ಚು ಬಹಳ. ಬಾಲಿವುಡ್ ಅಂಗಳದಲ್ಲೂ ವಿಜೇಂದರ್ ಛಾಪು ಮೂಡಿಸಿದ್ದಾರೆ. 2014ರಲ್ಲಿ ಅವರು ಫುಗ್ಲಿ ಎಂಬ ಹಿಂದಿ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಅಮೆಚೂರ್ ಬಾಕ್ಸಿಂಗ್ ಬಿಟ್ಟು ವೃತ್ತಿಪರ ಬಾಕ್ಸಿಂಗ್ ಆಡಲು ವಿಜೇಂದರ್ ನಿರ್ಧರಿಸಿದಾಗ ಹಲವು ಟೀಕೆಗಳು ಬಂದವು. ತಮ್ಮ ವಿರುದ್ಧ ಮಾತನಾಡಿದವರ ವಿರುದ್ಧ ತುಟಿ ಬಿಚ್ಚದ ವಿಜೇಂದರ್ ಅಂಗಳದಲ್ಲಿ ಎದುರಾಳಿಗೆ ನಿಖರ ಪಂಚ್‍ಗಳನ್ನು ನೀಡಿದರು. ಗೆಲುವಿನ ಮಾಲೆಗೆ ಒಂದೊಂದೆ ಹೂವನ್ನು ಪೋಣಿಸುತ್ತಾ ಸಾಗಿದ ವಿಜೇಂದರ್ ವೃತ್ತಿ ಪರ ಬಾಕ್ಸಿಂಗ್‍ನಲ್ಲಿ ಕಮಾಲ್ ಪ್ರದರ್ಶನ ನೀಡಿದ್ದಾರೆ. ವೃತ್ತಿ ಪರ ಬಾಕ್ಸಿಂಗ್‍ನಲ್ಲಿ ಜಯ: 2015 ಸೆಪ್ಟೆಂಬರ್ 10ರಂದು ವಿಜೇಂದರ್ ವೃತ್ತಿಪರ ಬಾಕ್ಸಿಂಗ್‍ನ ಮೊದಲ ಪಂದ್ಯದಲ್ಲಿ ಸೋನಿ ವೆಟ್ಟಿಂಗ್ ವಿರುದ್ಧ ಜಯ ಸಾಧಿಸಿದರು. ನಂತರ ಡೇನ್ ಗಿಲ್ಲಿನ್, ಸಮೀತ್, ಅಲೆಕ್ಸಾಂಡರ್ ಹೋರ್ವತ್, ಮಾಟಿಜ್ ರೊಯರ್, ಆಂಡ್ರಿಜ್ ಸೋಲ್ಡರ್, ಕೇರಿ ಹೋಪ್, ಫ್ರಾನ್ಸಿಸ್ ಚೆಕೊ ಅವರನ್ನು ಪರಾಜಯಗೊಳಿಸಿದ ವಿಜೇಂದರ್ ಗೆಲುವಿನ ಓಟವನ್ನು ಮುಂದುÀವರೆಸಿದ್ದಾರೆ. 2008ರ ಬೀಜಿಂಗ್ ಒಲಿಂಪಿಕ್ಸ್‍ನಲ್ಲಿ ವಿಜೇಂದರ್ ಸಿಂಗ್ ಅವರು ಭರ್ಜರಿ ಪ್ರದರ್ಶನ ನೀಡಿ, ಹಂತಹಂತವಾಗಿ ಮುನ್ನುಗುತ್ತಾ ಸೆಮಿಫೈನಲ್‍ಗೆ ಆರ್ಹತೆಯನ್ನು ಪಡೆಯುತ್ತಾರೆ. ಈ ಮೂಲಕ ಒಲಿಂಪಿಕ್ಸ್‍ನಲ್ಲಿ ಪದಕವನ್ನು ಪಡೆದ ಮೊದಲ ಭಾರತೀಯ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.

ಯಾರೇ ಎದುರಾಳಿ ಇರಲಿ ರಿಂಗ್ ಒಳಗಡೆ ವಿಜೇಂದರ್ ಎಂಟ್ರಿ ನೀಡಿದರೆ ಮುಗಿಯಿತು ಅಂಕಗಳನ್ನು ನೀಡುತ್ತಲೇ ಸಾಗುತ್ತಿದ್ದರು. ಈ ಅವಧಿಯಲ್ಲೇ ಅವರು ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಯ ನಂಬರ್ 1 ಆಟಗಾರನ ಗೌರವಕ್ಕೆ ಪಾತ್ರರಾದರು. ಇವರ ಕ್ರೀಡಾ ಸಾಧನೆ ಗುರುತಿಸಿದ ಭಾರತ ಸರ್ಕಾರ ಅವರಿಗೆ ಪದ್ಮಶ್ರೀ ಪಶಸ್ತಿಯನ್ನು ನೀಡಿ ಗೌರವಿಸಿದೆ. ವಿವಾದಗಳು ವಿಜೇಂದರ್ ಅವರನ್ನು ಬಿಟ್ಟಿಲ್ಲ. ಇವರ ಪತ್ನಿಗೆ ಸೇರಿದ ಕಾರಲ್ಲಿ ಬಹುಕೋಟಿ ಮೌಲ್ಯದ ಹೆರಾಯಿನ್ ಪತ್ತೆಯಾಗಿದೆ. ಪಂಜಾಬ್‍ನ ಜೀರಕ್‍ಪುರದಲ್ಲಿರುವ ವಿಜೇಂದರ್ ಸಿಂಗ್ ಅವರಿಗೆ ಸೇರಿದ ಫ್ಲಾಟ್ ಬಳಿ ನಿಂತಿದ್ದ ಕಾರಲ್ಲಿ ಸುಮಾರು 130 ಕೋಟಿ ರು. ಮೌಲ್ಯದ 26 ಕೆಜಿ ಹೆರಾಯಿನ್ ಅನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ವಿಜೇಂದರ್‍ಸಿಂಗ್ ಪತ್ನಿ ಅರ್ಚನಾಸಿಂಗ್ ಅವರಿಗೆ ಸೇರಿದ ಈ ಕಾರನ್ನು ಪೋಲೀಸರು ವಶಪಡಿಸಿಕೊಂಡಿದ್ದರು. ಆದರೆ, ವಿಜೇಂದರ್ ಅವರ ಕ್ರೀಡಾಬದ್ಧತೆ, ಸಾಧನೆ ಮತ್ತು ತನ್ಮಯತೆ ಎಲ್ಲಾ ವಿವಾದಗಳನ್ನೂ ಮುಸುಕಾಗಿಸಿ ಮನದಲ್ಲಿ ಅಭಿಮಾನದ ಚಿತ್ತಾರ ಮೂಡಿಸುವುದರಲ್ಲಿ ಎರಡು ಮಾತಿಲ್ಲ.

ವಿಜೇಂದರ್ ಪದಕ ಸಾಧನೆ

2000ರ ಒಲಿಂಪಿಕ್ಸ್‍ನಲ್ಲಿ ಕಂಚು
2009ರ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಕಂಚು
2014, 2006 ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಬೆಳ್ಳಿ
2010ರ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಕಂಚು
2010ರ ಏಷ್ಯನ ಗೇಮ್ಸ್‍ನಲ್ಲಿ ಚಿನ್ನ, 2016ರಲ್ಲಿ ಕಂಚು
2007, 2009 ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಪದಕ