Kannada News | kannada Useful Tips
ಮಕ್ಕಳಿಗೆ ಮಧ್ಯಾಹ್ನದ ಊಟಕ್ಕೆ ಏನು ಕಟ್ಟಿಕೊಡುವುದು? ಎಂಬುದೇ ದೊಡ್ಡ ಸಮಸ್ಯೆ. ಅಮ್ಮ ತಿಂಡಿ ಕೊಟ್ಟು ಕಳುಹಿಸಿದರೂ, ಇಂದಿನ ಯುವ ಜನತೆಯ ನಾಲಿಗೆಯ ಚಪಲವು ಫಾಸ್ಟ್ಫುಡ್ಗಳ ಮೇಲೆ ವಾಲಿ ಬಿಟ್ಟಿವೆ. ರಸ್ತೆ ಬದಿಯಲ್ಲಿ ಸಿಗುವ ಎಗ್ರೈಸ್, ಗೋಬಿ ಮಂಚೂರಿ, ಪಾನಿ ಪುರಿ ಆಕರ್ಷಣೆ, ಅಮ್ಮ ನೀಡಿದ ಡಬ್ಬಿಯ ಮೇಲಿನ ಮೋಹವನ್ನು ಮೀರಿವೆ. ಇದಕ್ಕೆ ಕಾಲೇಜ್ ಮತ್ತು ಹಾಸ್ಟೇಲ್ಗಳ ಮೆಸ್ಗಳೂ ಪರೋಕ್ಷ ಕಾರಣ ಇರಬಹುದು.
ಇದು ಕೇವಲ ಒಬ್ಬರ ಸಮಸ್ಯೆಯಲ್ಲ..
ಕಾಲೇಜಿಗೆ ಬೆಳಿಗ್ಗೆ ಬೇಗ ಎದ್ದು ಹೋಗುವ ಸಮಯಕ್ಕೆ ಕೆಲವೊಮ್ಮೆ ತಿಂಡಿ ಮಾಡುವುದು ಅಮ್ಮನಿಗೂ ಕಷ್ಟವೇ ಆದಾಗ ಹೊರಗೆ ಹೊಟ್ಟೆ ತುಂಬಿಸಿಕೊಳ್ಳದೆ ಬೇರೆ ಗತಿ ಇಲ್ಲ. ಮೆಸ್, ಕಾಲೇಜ್ ಕ್ಯಾಂಟೀನ್ ಊಟ ಎಂದರೆ ವಿದ್ಯಾರ್ಥಿಗಳು ಮುಖ ಮುರಿಯುತ್ತಾರೆ. ಕೆಲ ಮೆಸ್ಗಳಿನ ಊಟ ಅಂದರೆ ದೇವರಿಗೇ ಪ್ರೀತಿ. ಕಲಿಕೆಗಾಗಿ ಹಾಸ್ಟೇಲ್ನಲ್ಲಿ ಉಳಿಯುವ ವಿದ್ಯಾಥಿಗಳ ಪಾಡು ಹೇಳತೀರದು. ಉಪ್ಪಿದ್ದರೆ ಹುಳಿ ಇರುವುದಿಲ್ಲ, ಅನ್ನ ಕರಗಿ ಹೋಗಿ ಬಿಡುತ್ತದೆ ಹೀಗೆ ಅವರ ಕಂಪ್ಲೇಂಟ್ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಕೆಲವರ ಪಾಲಿಗೆ ತಿಂಡಿಯೇ ಮೃಷ್ಟಾನ್ನ.
ಕೆಲ ವಿದ್ಯಾರ್ಥಿಗಳಿಗೆ ದಿನ ನಿತ್ಯ ಊಟಕ್ಕೆಂದೇ ಅಷ್ಟೊಂದು ಹಣ ಸುರಿಯಲು ರೆಡಿ ಇರುವುದಿಲ್ಲ. ಅಂತವರು ದಿನ ನಿತ್ಯ ಮನೆಯಿಂದ ತಿಂಡಿ ತಂದು ತಿನ್ನುವುದು ಅನಿವಾರ್ಯ. ಹಂಚಿ ತಿನ್ನುವುದರಲ್ಲಿಯೂ ಖುಷಿ ಇದೆ ಎಂಬುದನ್ನು ಅವರು ಅರಿತುಕೊಂಡಿದ್ದಾರೆ. ಕೆಲವರು ಪಲಾವ್ ತಂದರೆ, ಇನ್ನೂ ಕೆಲವರು ಚಪಾತಿ. ಹೀಗೆ ಒಂದೇ ಊಟದಲ್ಲಿ ವಿವಿಧ ಭಕ್ಷ್ಯಗಳನ್ನು ಭಕ್ಷಿಸಬಹುದು. ಇದರ ಮಧ್ಯೆ ಯಾರದಾರೂ ಡಬ್ಬಿ ತಾರದಿದ್ದರೂ ಉಳಿದವರು ತಂದಿದ್ದರಲ್ಲೇ ಸಾಕಾಗಿಬಿಡುತ್ತದೆ.
ಹಾಸ್ಟೆಲ್-ಪಿ.ಜಿ ನಿವಾಸಿಗಳಿಗೆ ಹೊರಗಿನ ತಿಂಡಿಯೇ ಗತಿ:
ಹಾಸ್ಟಲ್ ಮತ್ತು ಪಿ.ಜಿಗಳಲ್ಲಿರುವವರು ನಿತ್ಯ ಉಪ್ಪಿಲ್ಲದ ಸಪ್ಪೆ ಊಟ ತಿಂದು, ತಿಂದು ರೋಸಿ ಹೋಗಿರುತ್ತಾರೆ. ಅಂತವರಿಗೆ ಹಲವೊಮ್ಮೆ ಹೊರಗಿನ ತಿಂಡಿ ಅನಿವಾರ್ಯ. ಮೆಸ್ಬಿಲ್ ಜೊತೆ ಹೊರಗಿನ ತಿಂಡಿಗಳ ಹಣವು ಅವರಿಗೆ ಭಾರವಾಗಿ ಬಿಡುತ್ತದೆ. ಪಾಲಕರಲ್ಲಿ ಅಲವತ್ತುಕೊಂಡರೆ ‘ದುಡ್ಡು ಕೊಡುತ್ತೇನೆ ಹೊರಗೆ ಹೋಗಿ ತಿನ್ನು ಮರಾಯ’ ಎಂಬ ಸಮಜಾಯಿಷಿ ನೀಡುತ್ತಾರೆ.
ಜೇಬಿಗೆ ಕತ್ತರಿ:
ನಿತ್ಯ ಕಾಲೇಜಿಗೆ ತಿಂಡಿ ಬಾಕ್ಸ್ ಹೊತ್ತು ತರುವವರಿಗೆ ಸಮಸ್ಯೆ ಇಲ್ಲ. ಬೇಕರಿ ಅಥವಾ ಹೋಟೆಲ್ನ ಮೊರೆ ಹೋಗುವವರಿಗೆ ಜೇಬು ಮತ್ತು ಆರೋಗ್ಯಕ್ಕೆ ಕತ್ತರಿ ಗ್ಯಾರಂಟಿ. ಹೋಟೆಲ್ ತಿಂಡಿಗಳು ಸಂಜೆ ಎನ್ನುವವರೆಗೆ ಮತ್ತೆ ಹಸಿವನ್ನು ಉಂಟು ಮಾಡಿ ಬಿಡುತ್ತದೆ. ಇದರೊಂದಿಗೆ ಕಾಲೇಜ್ ಬಿಟ್ಟು ಹೋಗುವಾಗ ಹೋಟೆಲ್ನ ಗೋಬಿ ಮಂಚೂರಿಯನ್ನೋ ಅಥವಾ ಭಟ್ಟರ ಅಂಗಡಿ ಭಜ್ಜಿಯನ್ನೋ ತಿನ್ನಬೇಕೆಂಬ ಆಲೋಚನೆ ಕೊನೆಯ ಕ್ಲಾಸಿನಲ್ಲಿ ಕುಳಿತಾಗಲೇ ಮುತ್ತಿ ಬಿಡುತ್ತವೆ.